ವಿದ್ಯಾರ್ಥಿಗಳೇ ಪ್ರಾಮಾಣಿಕತೆ ರೂಢಿಸಿಕೊಳ್ಳಿ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ.28
ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಸಂಯಮ, ಶಿಸ್ತು, ಪ್ರಾಮಾಣಿಕತೆ ರೂಢಿಸಿಕೊಳ್ಳಬೇಕು. ಆಲಸ್ಯ ಬಿಟ್ಟು ಸದಾ ಕ್ರಿಯಾಶೀಲರಾಗಿರಬೇಕು ಎಂದು ತಾಪಂ ಉಪಾಧ್ಯಕ್ಷ ಎಚ್.ಎಸ್. ಪುಟ್ಟೇಗೌಡ ಸಲಹೆ ಮಾಡಿದ್ದಾರೆ.
ನಗರದ ವಿಶ್ವವಿದ್ಯಾಲಯ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಬದುಕಿನಲ್ಲಿ ಸಂಯಮ, ಶಿಸ್ತು, ಪ್ರಾಮಾಣಿಕತೆ ಇಲ್ಲದಿದ್ದಲ್ಲಿ ಅವರ ಬದುಕು ತೂತು ಬಿದ್ದ ಮಡಕೆಯಂತಾಗುತ್ತದೆ ಎಂದರು.
ವಿದ್ಯೆ ಅತ್ಯಂತ ಶ್ರೇಷ್ಟವಾದುದು. ಅದು ಮನುಷ್ಯನಿಗೆ ವ್ಯಕ್ತಿತ್ವವನ್ನು ನೀಡುತ್ತದೆ. ವಿದ್ಯಾವಂತರಾಗ ಬಯಸುವವರು ನಿದ್ದೆ ಮತ್ತು ಸುಖ ಬಿಟ್ಟು ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು. ಉತ್ತಮ ಚಾರಿತ್ರ್ಯ ಅಳವಡಿಸಿಕೊಂಡು ಶೀಲವಂತರು, ಧೈರ್ಯವಂತರಾಗಬೇಕು ಎಂದು ಕಿವಿಮಾತು ಹೇಳಿದರು.
ಉತ್ತಮ ಮಾರ್ಗದಲ್ಲಿರಿ: ವಿದ್ಯಾರ್ಥಿ ದೆಸೆಯಲ್ಲಿ ಹಲವಾರು ಪ್ರಲೋಭನೆಗಳು, ಆಕರ್ಷಣೆಗಳು ಇರುತ್ತವೆ. ಅವುಗಳಿಗೆ ಬಲಿಯಾಗಿ ಹಾದಿ ತಪ್ಪಿದರೆ ಅವರ ಇಡೀ ಬಾಳು ನಾಶವಾಗುತ್ತವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬಹಳ ಸಂಯಮ ಮತ್ತು ಎಚ್ಚರಿಕೆಯಿಂದ ಉತ್ತಮ ಮಾರ್ಗ ತುಳಿಯಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ನಾಗೇಶ್ ಮಾತನಾಡಿ, ಏ.1ರಿಂದ 10ರವರೆಗೆ ನಡೆಯಲಿರುವ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಈ ಬಾರಿ ಜಿಲ್ಲೆಯ 331 ಶಾಲೆಗಳ 15,900 ಮತ್ತು ತಾಲೂಕಿನ 82 ಶಾಲೆಗಳ 4300 ವಿದ್ಯಾರ್ಥಿಗಳು ಎದುರಿಸಲಿದ್ದಾರೆ ಎಂದರು.
ವಿದ್ಯಾರ್ಥಿಗಳು ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಅನುಕೂಲವಾಗುವಂತೆ ಈಗಾಗಲೇ ಇಲಾಖೆಯಿಂದ 4-5 ಬಾರಿ ಪೂರ್ವಸಿದ್ಧತಾ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ಎಂ.ಎಸ್. ನಂಜುಂಡಸ್ವಾಮಿ, ವಿದ್ಯಾರ್ಥಿಗಳು ದೊಡ್ಡವರಾದ ನಂತರ ತಾವು ಓದಿದ ಶಾಲೆ ಮರೆಯಬಾರದು. ಅದರ ಅಭಿವೃದ್ಧಿಗೆ ಸಹಕಾರ ನೀಡಬೇಕು. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಮೂಲಕ ಶಾಲೆಗೆ ಕೀರ್ತಿ ತರಬೇಕು ಎಂದು ಮನವಿ ಮಾಡಿದರು.
ಪ್ರವೇಶ ಪತ್ರ: ಇದೇ ವೇಳೆ ಶಾಲೆಯಲ್ಲಿ ಶಾರದಾಪೂಜೆ ಮಾಡಲಾಯಿತು. ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಎದುರಿಸುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ವಿತರಿಸಲಾಯಿತು. ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ನಲ್ಲಿ ಶಾಲೆಯನ್ನು ಪ್ರತಿನಿಧಿಸಿದ ವಿದ್ಯಾರ್ಥಿನಿ ಎಚ್.ಆರ್. ನವಮಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ನಗರಸಭಾ ಸದಸ್ಯ ಸಿ.ಎಚ್. ಭುಜೇಂದ್ರರಾಜ ಅರಸ್, ನಿವೃತ್ತ ಉಪನ್ಯಾಸಕ ಪ್ರೊ.ಟಿ.ಎಂ. ಈಶ್ವರಪ್ಪ, ಶಾಲೆಯ ಗೌರವ ಕಾರ್ಯದರ್ಶಿ ಎಚ್.ಎಸ್. ರಾಮಚಂದ್ರ, ನಿರ್ದೇಶಕ ರಂಗನಾಥ್ ಉಪಸ್ಥಿತರಿದ್ದರು.
ಶಿಕ್ಷಕಿ ಬಿ.ಪಿ. ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕ ಆರ್. ಶ್ರೀನಿವಾಸ್ ಸ್ವಾಗತಿಸಿದರು. ಬಿ. ಸಿದ್ದಯ್ಯ ವಂದಿಸಿದರು.