ಆಳುವ ಪಕ್ಷದ ದುರಾಡಳಿತ ಜೆಡಿಎಸ್ಗೆ ವರ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ. 29
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ದುರಾಡಳಿತ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ಗೆ ವರವಾಗಲಿದೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ ಸಿ.ಎನ್. ಅಕ್ಮಲ್ ನಿವಾಸದಲ್ಲಿ ಶುಕ್ರವಾರ ನಡೆದ ಅಲ್ಪಸಂಖ್ಯಾತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಪ್ರಮುಖ ನಾಯಕರು ಜೈಲಿಗೆ ಹೋಗಿ ಬಂದಿರುವುದನ್ನು ನೋಡಿ ಜನ ಬೇಸತ್ತಿದ್ದಾರೆ ಎಂದರು.
ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ ಮಾತನಾಡಿ, ಸಿರಿಗೆರೆ ಸ್ವಾಮೀಜಿಗಳ ಎದುರು ಚುನಾವಣೆಯಲ್ಲಿ ಯಾವ ಪಕ್ಷದವರೂ ಹಣ ಹೆಂಡ ನೀಡದಂತೆ ಪ್ರಮಾಣ ಮಾಡಿದ್ದೇವೆ. ಬಿಜೆಪಿಯ ಭ್ರಷ್ಟಾಚಾರಕ್ಕೆ ಈ ಚುನಾವಣೆಯಲ್ಲಿ ಮತದಾರರು ಮುಕ್ತಾಯ ಹಾಡಬೇಕಿದೆ ಎಂದರು.
ಸಿ.ಟಿ. ರವಿ ಯುವ ಜನಾಂಗವನ್ನು ದಿಕ್ಕುತಪ್ಪಿಸಿ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ರು. ಹಣ ಲೂಟಿ ಮಾಡಿದ್ದಾರೆ. ಜೊತೆಗೆ ಕಾಂಗ್ರೆಸ್ ಮುಖಂಡ ಶಾಂತೇಗೌಡರ ಹೆಸರಿನಲ್ಲಿದ್ದ ಜಲ್ಲಿ ಕ್ರಷರ್ ತೆಗೆದುಕೊಂಡು ಅವರ ಹೆಸರಿನಲ್ಲೇ ಗುತ್ತಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎಸ್.ಎಲ್. ಬೋಜೇಗೌಡ ಮಾತನಾಡಿ, ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ಗೆ ನೇರಸ್ಪರ್ಧೆ. ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ. ಬಿಜೆಪಿಯವರು ಚುನಾವಣೆಯಲ್ಲಿ ವಾಮಮಾರ್ಗದ ಮೂಲಕ ಆಯ್ಕೆಯಾಗಲು ಪ್ರಯತ್ನಿಸುತ್ತಿದ್ದಾರೆ. ಜಿಲ್ಲೆಯ ಸಮಸ್ಯೆಗಳು ಬಗೆಹರಿಯಲು ಜೆಡಿಎಸ್ ಅನ್ನು ಬೆಂಬಲಿಸಬೇಕು ಎಂದರು.
ರಾಜ್ಯ ಯುವ ಕಾರ್ಯಾಧ್ಯಕ್ಷ ಸಿ.ಎನ್. ಅಕ್ಮಲ್ ಮಾತನಾಡಿ, ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ನ 15 ಕ್ಕೂ ಹೆಚ್ಚು ಸದಸ್ಯರು ಗೆಲ್ಲಬೇಕಿತ್ತು. ಬಿಜೆಪಿಯವರು ಹಣ ನೀಡಿ ಮತ ಪಡೆದಿದ್ದಾರೆ ಎಂದು ತಿಳಿಸಿದರು.
ರಾಜ್ಯ ಅಲ್ಪಸಂಖ್ಯಾತರ ಅಧ್ಯಕ್ಷ ಜಕೀಲ್ ನವಾಜ, ಎ.ಆರ್. ಷರೀಫ್, ನಗರಾಧ್ಯಕ್ಷ ಜಯರಾಜ್ ಅರಸ್, ರಮೇಶ್, ಸಮೀರ್ ಹಾಗೂ ಅಲ್ಪಸಂಖ್ಯಾತ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.