ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಉಚಿತ ಆರೋಗ್ಯ ತಪಾಸಣಾ ಶಿಬಿರ

Rashmi Kasaragodu
Updated On : 30 Mar 2013, 11:47 am

ತರೀಕೆರೆ: ಆಯುಷ್ ಇಲಾಖೆಯಿಂದ ಶುಕ್ರವಾರ ಪಟ್ಟಣದಲ್ಲಿ ಉಚಿತ ಆಯುಷ್ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು. ತಾಲೂಕು ವೈದ್ಯಾಧಿಕಾರಿ ಡಾ. ಗಣೇಶ್ ಮಾತನಾಡಿ, ಆಯುರ್ವೇದ ವೈದ್ಯ ಪದ್ದತಿಯನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಗಳಲ್ಲಿ ಅನೇಕ ಅನುಕೂಲಗಳನ್ನು ಕಲ್ಪಿಸಲಾಗಿದೆ ಎಂದರು. ಆಯುರ್ವೇದ ವೈದ್ಯ ಡಾ.ಎಸ್.ಎನ್. ಆಚಾರ್ಯ ಮಾತನಾಡಿ, ಆಯುರ್ವೇದ ಮತ್ತು ಅಲೋಪತಿ ಎರಡೂ ಸಮಾಗಮಗೊಳಿಸಿ ಔಷೋಧಪಚಾರ ಮತ್ತು  ಚಿಕಿತ್ಸಾ ಪದ್ದತಿಯಿಂದ ರೋಗಿಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು. ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಕೊಟ್ರೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ದೇಹದಲ್ಲೇ ಔಷಧ ಉತ್ಪಾದಿಸಬಹುದು, ಯೋಗವನ್ನು ಕಲಿಯಬೇಕು ಮತ್ತು ನಿರಂತರವಾಗಿ ಅಭ್ಯಾಸ ಮಾಡಬೇಕು ಎಂದು ತಿಳಿಸಿದರು. ಡಾ.ಶ್ರೀನಿವಾಸ್, ಡಾ. ಚೇತನ್, ಡಾ. ಶೀಲಾ ಇದ್ದರು.
ವಿಶೇಷ ಉಪನ್ಯಾಸ
ಶಿವಮೊಗ್ಗ: ನಗರದ ಡಿವಿಎಸ್ ಶಾಲಾ ಮತ್ತು ವಿಜ್ಞಾನ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ  ಮಾ.30 ಬೆಳಿಗ್ಗೆ 11-30ಕ್ಕೆ ಭಾರತೀಯ ಪುರಾತತ್ವ ವಿಷಯದ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಕಾಲೇಜಿನ ಇತಿಹಾಸ ವೇದಿಕೆ ಹಾಗೂ ಭಾರತೀಯ ಇತಿಹಾಸ ಸಂಕಲನ ಸಮಿತಿಯ ಶಿವಮೊಗ್ಗ ಘಟಕದ ಸಂಯುಕ್ತಾಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ನವದೆಹಲಿಯ ಭಾರತೀಯ ಇತಿಹಾಸ ಸಂಕಲನ ಸಂಯೋಜನಾದ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ಬಾಲಮುಕುಂದ ಪಾಂಡೆ ಉಪನ್ಯಾಸ ನೀಡುವರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಮಂಜುನಾಥ ಅಧ್ಯಕ್ಷತೆ ವಹಿಸುವರು. ಇತಿಹಾಸ ವಿಭಾಗದ ಮುಖ್ಯಸ್ಥ ಟಿ.ಎಸ್. ಗೋಪಾಲ, ಪ್ರೊ. ಕೆ.ಜಿ. ವೆಂಕಟೇಶ್, ಡಾ. ಬಾಲಕೃಷ್ಣ ಹೆಗಡೆ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಯಕ್ಷಗಾನ ಪ್ರದರ್ಶನ
ಸಾಗರ: ಇಲ್ಲಿನ ಯಕ್ಷಮಿತ್ರರು ಸಂಯೋಜನೆಯಲ್ಲಿ 30 ರ ರಾತ್ರಿ 9.30 ರಿಂದ ನೆಹರೂ ಮೈದಾನದಲ್ಲಿ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರಿಂದ ಅದ್ದೂರಿ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ. ರಾಣಿ ಶಶಿಪ್ರಭೆ- ಗದಾಯುದ್ಧ-ಲವಕುಶ ಪ್ರಸಂಗಗಳು ಪ್ರದರ್ಶನಗೊಳ್ಳಲಿದ್ದು, ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗಡೆ, ರಾಘವೇಂದ್ರ ಆಚಾರಿ, ಶಂಕರಭಟ್ ಬ್ರಹ್ಮೂರು, ಶಂಕರ ಭಾಗವತ್, ಮುಮ್ಮೇಳದಲ್ಲಿ ವಿದ್ಯಾಧರ ಜಲವಳ್ಳಿ, ಥಂಡಿಮನೆ, ತೀರ್ಥಳ್ಳಿ, ನೀಲ್ಕೋಡು, ಕಣ್ಣಿಮನೆ, ಭಾಸ್ಕರ ಜೋಶಿ, ಕ್ಯಾದಗಿ, ದೇವಾಡಿಗ, ಕಡಬಾಳ, ತೊಂಬಟ್ಟು ಮುಂತಾದ ಖ್ಯಾತ ಕಲಾವಿದರು ಭಾಗವಹಿಸುವರು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಘಟಕರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement