ಉದಾರೀಕರಣದಿಂದ ಬದುಕು ದಯನೀಯ
ಕೊಪ್ಪ: ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ನೀತಿಗಳಿಂದ ಜನಸಾಮಾನ್ಯರ ಬದುಕು ದಯನೀಯ ಸ್ಥಿತಿ ತಲುಪಿದೆ ಎಂದು ರಾಜ್ಯ ರೈತ ಸಂಘದ ಮುಖಂಡ ಕಡಿದಾಳ್ ಶಾಮಣ್ಣ ತಿಳಿಸಿದ್ದಾರೆ.
ವಿಚಾರ ಸಂಕಿರಣ: ಬಾಳಗಡಿಯ ಒಕ್ಕಲಿಗ ಸಮುದಾಯ ಭವನದಲ್ಲಿ ಯುಜಿಸಿ ಸಹಯೋಗದೊಂದಿಗೆ ಇಲ್ಲಿನ ಪ್ರಥಮ ದರ್ಜೆ ಕಾಲೇಜು ಮತ್ತು ಕುವೆಂಪು ವಿವಿಯ ಅರ್ಥಶಾಸ್ತ್ರ ಉಪನ್ಯಾಸಕರ ಸಂಘ ಜಂಟಿಯಾಗಿ ಆಯೋಜಿಸಿದ್ದ ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಭಾರತದ ಆರ್ಥಿಕತೆಯ ಮೇಲೆ ಆದ ಪರಿಣಾಮ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಅಡಕೆ ಹೊಂಬಾಳೆ ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನರಸಿಂಹರಾವ್ ನೇತೃತ್ವದ ಕೇಂದ್ರ ಸರ್ಕಾರ ಭಾರತದಲ್ಲಿ ಜಾಗತೀಕರಣ ನೀತಿಗೆ ಮೊದಲ ಬಾರಿಗೆ ಅವಕಾಶ ನೀಡಿತು. ಇದರಿಂದ ದೇಶದ ಅರ್ಥವ್ಯವಸ್ಥೆಯ ಮೇಲೆ ಬಲವಾದ ಹೊಡೆತ ಬಿದ್ದು ಇದರ ನೇರ ಪರಿಣಾಮ ಮಧ್ಯಮವರ್ಗದ ಮೇಲೆ ಬಿತ್ತು. ಮಲೆನಾಡಿನಲ್ಲಿ ಜನರ ಜೀವನಾಡಿಯಾಗಿದ್ದ ಅಡಕೆ ಬೆಳೆಗೆ ಬೇಡಿಕೆಯಿಲ್ಲದೆ ಬೆಲೆ ಕುಸಿದು ರೈತರು ಸಾಲದ ಹೊರೆಯಿಂದ ನೊಂದು ಆತ್ಮಹತ್ಯೆಗೆ ಶರಣಾಗುವ ಹಂತಕ್ಕೆ ತಲುಪುವಂತಾಗಿದ್ದು ಉದಾರೀಕರಣ ನೀತಿಯಿಂದಾಗಿ ಎಂದರು.
ಭ್ರಷ್ಟಾಚಾರ: ಎಲ್ಲಾ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ತುಂಬಿಕೊಂಡಿದ್ದು ಗಾಂಧೀಜಿಯ ಸಪ್ತ ಮಹಾ ಪಾಪಗಳು ಎಂದು ಪರಿಗಣಿಸಿದ್ದ ವಿಷಯಗಳಿಗೆ ಇಂದು ಹೆಚ್ಚು ಅದ್ಯತೆ ಸಿಗುತ್ತಿದೆ. ಹಣವೇ ಪ್ರಮುಖವಾಗಿದ್ದು ಉಳಿದೆಲ್ಲವೂ ಗೌಣವೆನಿಸಿವೆ. ಭ್ರಷ್ಟಾಚಾರ ವಿರೋಧಿಸಿ ಅಣ್ಣಾ ಹಜಾರೆಯಂತವರು ನಡೆಸಿದ ಹೋರಾಟಗಳೇ ಪ್ರಾಮುಖ್ಯತೆ ಕಳೆದುಕೊಂಡಿತು ಎಂದರು.
ಮೈಸೂರು ವಿವಿಯ ಬಿ.ಎಸ್. ಶ್ರೀಕಂಠಾರಾಧ್ಯ ಪ್ರಧಾನ ಭಾಷಣ ಮಾಡಿದರು. ಕೊಪ್ಪ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪೊ.ಡಾ. ದೇವರಾಜ್ ಅಧ್ಯಕ್ಷತೆ ವಹಿಸಿದ್ದು, ಪ್ರೊ.ಟಿ.ಆರ್. ಮಂಜುನಾಥ, ಪ್ರೊ. ವೆಂಕಟಾಚಲಂ, ಪ್ರೊ. ಪ್ರಸನ್ನ ಇದ್ದರು. ಇದೇ ಸಂದರ್ಭದಲ್ಲಿ ಹಿಂದೆ ನಡೆದ ವಿಚಾರ ಸಂಕಿರಣದಲ್ಲಿ ಮಂಡಿಸಲಾದ ಸಂಶೋಧನಾ ಪ್ರಬಂಧಗಳ ಪುಸ್ತಕ ರೂಪದ ಸಂಗ್ರಹ ಬಿಡುಗಡೆ ಮಾಡಲಾಯಿತು