ಕಳಪೆ ಕಾಮಗಾರಿ: ಲೋಕಾಯುಕ್ತಕ್ಕೆ ದೂರು
ಕ.ಪ್ರ.ವಾರ್ತೆ, ಮೂಡಿಗೆರೆ, ಮಾ.29 ಸಂತೆ ಮೈದಾನದಲ್ಲಿರುವ ಕುಸಿದು ಬಿದ್ದ ಮೋರಿಯದ್ದು ಕಳಪೆ ಕಾಮಗಾರಿ ಎಂದು ದೃಢಪಟ್ಟಿದ್ದು, ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸುವುದಾಗಿ ನಾಗರಿಕ ವೇದಿಕೆ ಕಾರ್ಯದರ್ಶಿ ಮನಮೋಹನ್ ತಿಳಿಸಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ಪಪಂನ ಹಿಂದಿನ ಅಧ್ಯಕ್ಷರಾದ ಲತಾ ಲಕ್ಷ್ಮಣ್ ಅವರ ಅವಧಿಯಲ್ಲಿ ಪಪಂಗೆ ಹೊಂದಿಕೊಂಡಿರುವ ಸಂತೆಯ ಒಂದು ಭಾಗದ ಮೋರಿಯ ಮೆಲ್ಪದರ ಕುಸಿದು ಓಡಾಟಕ್ಕೆ ಅನನುಕೂಲವಾಗಿದ್ದು, ಈ ಸಂಬಂಧ ಅಧ್ಯಕ್ಷರಿಗೆ ಮೋರಿ ದುರಸ್ತಿಪಡಿಸುವಂತೆ ಮನವಿ ಮಾಡಿಕೊಂಡಾಗ, ಅಧ್ಯಕ್ಷರು ತಮ್ಮ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿದ್ದರು ಎಂದರು.
ನಂತರ ಮೋರಿ ಮೇಲ್ಪದರವನ್ನು ತುರಾತುರಿಯಲ್ಲಿ ಮುಗಿಸಿ ಕಾಮಗಾರಿ ಬಿಲ್ಲು ಪಡೆದುಕೊಂಡರು. ಆದರೆ ಆರು ತಿಂಗಳಲ್ಲೆ 2 ನೇ ಬಾರಿಗೆ ಮೋರಿಯ ಮೇಲ್ಪದರ ಕುಸಿದಿದ್ದು, ಕಾಮಗಾರಿಯ ಕಳಪೆ ಗುಣಮಟ್ಟವನ್ನು ಸಾಬೀತು ಪಡಿಸುತ್ತಿದೆ. ಕಾಮಗಾರಿ ಮಾಡಿದ ಅಧ್ಯಕ್ಷರು, ಮುಖ್ಯಾಧಿಖಾರಿಗಳು ಹಾಗೂ ಕಿರಿಯ ಅಭಿಯಂತರರ ಮೇಲೆ ತನಿಖೆ ನಡೆಸುವಂತೆ ಹಾಗೂ ಸಾರ್ವಜನಿಕರ ಹಣ ಪೋಲು ಮಾಡಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಲೋಕಾಯುಕ್ತರಿಗೆ ದೂರು ಸಲ್ಲಿಸುತ್ತಿರುವುದಾಗಿ ತಿಳಿಸಿದರು.