ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಶೃಂಗೇರಿ ವಿಪ್ರ ಸಮಾವೇಶ ದಿಕ್ಕು ತಪ್ಪಿಸುವ ಪ್ರಯತ್ನ

Rashmi Kasaragodu
Updated On : 30 Mar 2013, 11:40 am

ಕನ್ನಡಪ್ರಭ,ವಾರ್ತೆ,ಚಿಕ್ಕಮಗಳೂರು,ಮಾ. 29
ಶೃಂಗೇರಿಯಲ್ಲಿ ಹಮ್ಮಿಕೊಳ್ಳಲಾಗಿರುವ ವಿಪ್ರ ಸಮಾವೇಶವು ಬ್ರಾಹ್ಮಣರನ್ನು ದಿಕ್ಕು ತಪ್ಪಿಸುವ ಹುನ್ನಾರವಾಗಿದೆ ಎಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆ ಕಾರ್ಯಕರ್ತೆ ಸುಮ ನಾಗೇಶ್ ಆರೋಪಿಸಿದ್ದಾರೆ.
 ಚುನಾವಣೆ ಸಮೀಪಿಸುತ್ತಿದ್ದಂತೆ ಜಾತೀಯ ಸಮಾವೇಶಗಳನ್ನು ಹುಟ್ಟು ಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು ರಾಜಕೀಯ ಪಕ್ಷಗಳ ಇತ್ತೀಚಿನ ಆಟವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗುಪ್ತ ಅಜೆಂಡಾಕ್ಕೆ ಬಲಿಯಾಗದಿರಲಿ: ನಡೆ ನುಡಿ ಆಚಾರ ವಿಚಾರಗಳಿಂದ ಜೀವ ಜಗತ್ತಿನ ಸಕಲರ ಹಿತಕ್ಕಾಗಿ ಸದಾ ತುಡಿಯುತ್ತಾ ಬಂದಿರುವ ಬ್ರಾಹ್ಮಣ ಸಮಾಜ ಈಗ ನಾಲ್ಕಾರು ಜನರ ಗುಪ್ತ ಅಜೆಂಡಾಕ್ಕೆ ಬಲಿಯಾಗದಿರಲಿ. ಈ ಸಮಾವೇಶ ಯಾವುದೇ ಉನ್ನತ ಗುರಿ ಹೊಂದಿರದ ಅರ್ಥಹೀನ ಒಡ್ಡೋಲಗವಾಗಿದೆ ಎಂದು ತಿಳಿಸಿದರು.
 ಇಡೀ ಸಮಾವೇಶ ಬ್ರಾಹ್ಮಣ್ಯದ ಸಾಮಾಜಿಕ, ಆರ್ಥಿಕ ಸಂಕಟಗಳಿಗೆ ಧ್ವನಿಯಾಗುವ ಬದಲು ಸಾಹಿತ್ಯ ಸಮ್ಮೇಳನ ಒಂದರ ನಕಲಾಗಿ ಪರಿವರ್ತಿತವಾಗಿರುವುದು ದುರ್ದೈವದ ಸಂಗತಿ. ಬ್ರಾಹ್ಮಣ ಸಮಾಜ ವಿಘಟಿತವಾಗುತ್ತಿರುವ ಈ ಸಂಕ್ರಮಣ ಘಟ್ಟದಲ್ಲಿ ಒಗ್ಗಟ್ಟಿನ ಐಕ್ಯಮಂತ್ರ ಪಠಿಸಬೇಕಾದ ಸಮಯದಲ್ಲಿ ಬ್ರಾಹ್ಮಣರ ವಿವಿಧ ಪಂಗಡಗಳ ಸಂಘಟಕರನ್ನೇ ಅವರವರ ಪಂಗಡಗಳ ಹೆಸರಿನಲ್ಲೇ ಮುಂಚೂಣಿಯಲ್ಲಿಟ್ಟು ಸಮಾವೇಶ ನಡೆಸುವುದರಿಂದ ಏನು ಸಂದೇಶ ನೀಡಲಾಗುತ್ತದೆ ಎಂದು ಪ್ರಶ್ನಿಸಿದರು.
 ಈ ಪ್ರದೇಶದಲ್ಲಿನ ಬ್ರಾಹ್ಮಣ ಸಮುದಾಯದ ಅನೇಕ ಕುಟುಂಬಗಳು ತೀವ್ರ ಸಂಕಟಕರ ಸನ್ನಿವೇಶದಲ್ಲಿ ದಿನದೂಡುತ್ತಿವೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಗೌಡಸಾರಸ್ವತರನ್ನೂ, ವಿಶ್ವಕರ್ಮರನ್ನೂ ತನ್ನ ವಿಶಾಲ ವ್ಯಾಪ್ತಿಯೊಳಗೆ ಸೇರಿಸಿಕೊಂಡಿದ್ದು ಹಿಂದೊಮ್ಮೆ ಶೃಂಗೇರಿಗೆ ರಥಯಾತ್ರೆ ಬಂದಾಗಲೂ ಇಲ್ಲಿ ಅವರನ್ನೆಲ್ಲಾ ಬಳಸಿಕೊಳ್ಳಲಾಗಿತ್ತು. ಆದರೆ, ಶೃಂಗೇರಿ ಸಮಾವೇಶದಿಂದ ಗೌಡಸಾರಸ್ವತರನ್ನೂ, ವಿಶ್ವಕರ್ಮರನ್ನೂ ಸಂಪೂರ್ಣವಾಗಿ ಹೊರಗಿಟ್ಟು ಮಡಿವಂತಿಕೆ ಪ್ರದರ್ಶಿಸಲಾಗಿದೆ ಎಂದು ಆರೋಪಿಸಿದರು.
20 ಲಕ್ಷ ಖರ್ಚು: ಈ ಸಮಾವೇಶಕ್ಕೆ ಸುಮಾರು 20 ಲಕ್ಷ ಖರ್ಚು ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಶೃಂಗೇರಿ ಕ್ಷೇತ್ರದಲ್ಲಿ ಮನೆಯಲ್ಲಿ ಸಾವಾದರೆ ಅಂತಿಮ ವಿಧಿ ಹೇಗೆ ಮಾಡಲಿ ಎಂದು ಕಂಗಾಲಾಗುವ ಬಡ ಬ್ರಾಹ್ಮಣರು ಇದ್ದಾರೆ. ಮಕ್ಕಳ ಮದುವೆ ಹಾಗೂ ಇತರೆ ಕಾರ್ಯಗಳನ್ನು ಮಾಡಲು ಶಕ್ತಿ ಇಲ್ಲದೆ ಅಸಹಾಯಕರಾಗಿದ್ದಾರೆ. ಎಷ್ಟೋ ಮಕ್ಕಳು ಹಣಕಾಸಿನ ತೊಂದರೆಯಿಂದಾಗಿ ಅರ್ಧದಲ್ಲೇ ಶಿಕ್ಷಣವನ್ನು ಮೊಟಕುಗೊಳಿಸಿದ್ದಾರೆ. ಇಂತಹವರ ನೆರವಿಗೆ ಎಂದೂ ಬಾರದ ಮುಖಂಡರು ಸಮ್ಮೇಳನದ ಹೆಸರಿನಲ್ಲಿ ಹಣ ವೆಚ್ಚ ಮಾಡುತ್ತಿದ್ದಾರೆ ಎಂದು ದೂರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement