ಸ್ವಾವಲಂಬಿ ಬದುಕಿನ ವಾತಾವರಣ ಸೃಷ್ಟಿಯಾಗಲಿ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ. 29
ಮಹಿಳೆಯರು ಆತ್ಮಸ್ಥೈರ್ಯದಿಂದ ಸ್ವಾವಲಂಬಿಗಳಾಗಿ ಬಾಳುವ ವಾತಾವರಣ ಸಮಾಜದಲ್ಲಿ ಸೃಷ್ಟಿಯಾಗಬೇಕು ಎಂದು ಕಿತ್ತೂರುರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತೆ ಯಮುನಾ ಸಿ.ಶೆಟ್ಟಿ ಹೇಳಿದ್ದಾರೆ.
ನಗರದ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಅಕ್ಕಮಹಾದೇವಿ ಮಹಿಳಾ ಸಂಘ ಶರಣೆಮಾದಲಾಂಬಿಕೆ ತಂಡ ಹೋಳಿ ಹುಣ್ಣಿಮೆಯಂದು ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಮಹಿಳೆಯರು ಇಂದು ಎಲ್ಲ ರಂಗಗಳಲ್ಲೂ ಪುರುಷರಿಗೆ ಸರಿಸಮಾನರಾಗಿ ಕಾರ್ಯನಿರ್ವಹಿಸಿ ಗಮನ ಸೆಳೆದಿದ್ದಾರೆ. ಮನೆ ನಿರ್ವಹಣೆಯ ಜೊತೆಗೆ ಬಹಳಷ್ಟು ಮಹಿಳೆಯರು ಕೃಷಿ ಚಟುವಟಿಕೆಯಲ್ಲಿ, ಕೆಲವರು ಕಚೇರಿಗಳಲ್ಲಿ ಪುರುಷರಷ್ಟೇ ಶ್ರಮವಹಿಸಿ ದುಡಿಯುತ್ತಿದ್ದಾರೆ. ಬಹುತೇಕ ಕಡೆ ಮಹಿಳೆಗೆ ಇಂದು ಸಮಾನತೆ ಲಭ್ಯವಾಗಿದ್ದರೂ, ಆಡಳಿತ ರಂಗದಲ್ಲಿ ಸೂಕ್ತ ಸ್ಥಾನಮಾನ ಸಿಗಬೇಕಾಗಿದೆ ಎಂದು ಹೇಳಿದರು.
ಎಐಟಿ ಕಾಲೇಜಿನ ಉಪನ್ಯಾಸಕಿ ಚಿತ್ರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಳ್ಳೆಯದನ್ನು ಸಮಾಜದಲ್ಲಿ ಬಿತ್ತಲು ಸಂಸ್ಕಾರವನ್ನು ಮಕ್ಕಳಿಗೆ ನೀಡುವಲ್ಲಿ ಮಹಿಳೆಯರ ಪಾತ್ರ ಮುಖ್ಯ. ನಾಲಿಗೆ ಒಳ್ಳೆಯದನ್ನು ನುಡಿದರೆ, ಸಂಬಂಧಗಳು ಉತ್ತಮವಾಗಿರುತ್ತದೆ. ಸಜ್ಜನರ ಸಹವಾಸದಿಂದ ನಮ್ಮ ಜ್ಞಾನ ಅರಿವಿನ ಹರವು ವಿಸ್ತಾರವಾಗುತ್ತದೆ ಎಂದರು.
ಅಕ್ಕಮಹಾದೇವಿ ಮಹಿಳಾ ಸಂಘದ ಉಪಾಧ್ಯಕ್ಷೆ ಕಾತ್ಯಾಯಿನಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಯಪಾಲನೆಯನ್ನು ಮಹಿಳೆಯರು ಅಳವಡಿಸಿಕೊಂಡರೆ ಸಹಜವಾಗಿಯೇ ಸಂಯಮ, ಶಿಸ್ತು ಸಮಾಜದಲ್ಲಿ ಮೂಡುತ್ತದೆ ಎಂದರು. ಕಾರ್ಯದರ್ಶಿ ಹೇಮಲತಾ, ಸಹ ಕಾರ್ಯದರ್ಶಿ ಭಾರತೀ ಶಿವರುದ್ರಪ್ಪ, ಸಹ ಖಜಾಂಚಿ ರೇಖಾ ಉಮಾಶಂಕರ್ ಇದ್ದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಚಿಕ್ಕಮಗಳೂರು ವಿವಿಧೋದ್ದೇಶ ಸಮಾಜ ಸೇವಾ ಸಂಸ್ಥೆ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನನಿ ಕಾರ್ಯ ಜನನಿ ಗುರು ಎಂಬಂತೆ ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಖಾಸಗಿ ಸಂಸ್ಥೆಗಳು ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ಮಹಿಳೆ ಸಬಲೀಕರಣದ ಕಡೆ ಹೆಜ್ಜೆ ಹಾಕಬೇಕೆಂದರು.
ವಕೀಲೆ ಡಿ.ಎಸ್. ಮಮತಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆ ಮೇಲೆ ಅತ್ಯಾಚಾರ,ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ಮನೆ ಮತ್ತು ಶಾಲೆಗಳಿಗೆ ತೆರಳಿ ಹೆಣ್ಣು ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ಸಂಘ ಸಂಸ್ಥೆಗಳು ಮಾಡಬೇಕೆಂದರು. ಡಾ.ಬಿ.ಎಲ್. ಭಾಗ್ಯಲಕ್ಷ್ಮಿ ಮಾತನಾಡಿದರು. ರೆನಿಟಾ ವರದಿ ಮಂಡಿಸಿದರು, ಎಸ್.ಎ. ಸುಂದರೇಶ್, ಗೋಪಾಲಕೃಷ್ಣ, ಸಿಸ್ಟರ್ ಜಮ್ಮಮೇರಿ ಇದ್ದರು.