ಏ.1ರಿಂದ 10ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ. 30
ಪ್ರಸ್ತುತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯು ಏ.1 ರಿಂದ 10 ರವರೆಗೆ ನಡೆಯಲಿದ್ದು, ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಒಟ್ಟು 313 ಶಾಲೆಯ 16896 ವಿದ್ಯಾರ್ಥಿಗಳು 66 ಪರೀಕ್ಷಾ ಕೇಂದ್ರದಲ್ಲಿ ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ.
7913 ಬಾಲಕರು, 7894 ಬಾಲಕಿಯರು ಸೇರಿದಂತೆ ಒಟ್ಟು 15807 ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆ ಬರೆಯಲಿದ್ದು, 730 ಬಾಲಕರು, 359 ಬಾಲಕಿಯರು ಸೇರಿದಂತೆ ಒಟ್ಟು 1089 ಹಳೇ ವಿದ್ಯಾರ್ಥಿಗಳಿದ್ದಾರೆ.
ಪರೀಕ್ಷಾ ಕಾರ್ಯ ಸುಗಮವಾಗಿ ನಡೆಸುವ ಸಲುವಾಗಿ ಪ್ರತಿ ತಾಲೂಕಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಹಸೀಲ್ದಾರ್, ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನೊಳಗೊಂಡ ಜಾಗೃತಿ ದಳ ತಂಡವನ್ನು ರಚಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಜಾಗೃತ ದಳವನ್ನು ರಚಿಸಿ ಶೈಕ್ಷಣಿಕ ವಲಯಗಳಲ್ಲಿನ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ಕಾರ್ಯವನ್ನು ವೀಕ್ಷಿಸಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.
ತಾಲೂಕಿನಲ್ಲಿ 4332 ವಿದ್ಯಾರ್ಥಿಗಳು: ಚಿಕ್ಕಮಗಳೂರು ತಾಲೂಕಿನಲ್ಲಿ 4332 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ನಾಗೇಶ್ ತಿಳಿಸಿದ್ದಾರೆ.
ತಾಲೂಕಿನ 82 ಪ್ರೌಢಶಾಲೆಗಳ ಈ ವಿದ್ಯಾರ್ಥಿಗಳಿಗೆ 19 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಇವುಗಳಲ್ಲಿ 12 ಕ್ಲಸ್ಟರ್ ಕೇಂದ್ರ, 5 ಖಾಸಗೀ ಕೇಂದ್ರ ಮತ್ತು 5 ಗ್ರಾಮೀಣ ಕೇಂದ್ರಗಳಾಗಿವೆ. ಪ್ರತಿ ಕೇಂದ್ರಕ್ಕೂ 2 ಜಾಗೃತ ದಳ ಕಾರ್ಯ ನಿರ್ವಹಿಸಲಿವೆ. ಇದಲ್ಲದೆ ತಹಸೀಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದ ಪ್ರತ್ಯೇಕ ಮೊಬೈಲ್ ಸ್ಕ್ವಾಡ್ಗಳು ಕಾರ್ಯನಿರ್ವಹಿಸಲಿದೆ.
ಬೆಳಿಗ್ಗೆ 9.30 ಗಂಟೆಗೆ ಆರಂಭ: ಈ ವರ್ಷ ಪರೀಕ್ಷೆಗಳು ಬೆಳಿಗ್ಗೆ 9.30 ಗಂಟೆಗೆ ಆರಂಭಗೊಳ್ಳಲಿದೆ. ಪರೀಕ್ಷೆ 3 ಗಂಟೆ ಅವಧಿಯಾಗಿದ್ದು, ಪ್ರಶ್ನೆ ಪತ್ರಿಕೆ ಓದಲು ಪ್ರತ್ಯೇಕ 15 ನಿಮಿಷ ಕಲಾವಕಾಶ ಇದೆ. ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತ ಸೆಕ್ಷನ್ 144 ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ, ಅಲ್ಲದೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ.
ತುರ್ತು ಸಂದರ್ಭದಲ್ಲಿ ನೆರವಾಗಲು ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯಿಂದ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಲಾಗುತ್ತಿದೆ. ಪ್ರಶ್ನೆ ಪತ್ರಿಕೆಗಳನ್ನು ಖಜಾನೆಯಲ್ಲಿರಿಸಲಾಗಿದ್ದು, ಪರೀಕ್ಷಾ ದಿನ ಕೇಂದ್ರಗಳಿಗೆ ತಲುಪಿಸಲಾಗುವುದು. ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಇಡಲು ನಗರದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಗಿದೆ. ಅಲ್ಲದೆ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ಬುಕ್ ಲೆಟ್ ಒಂದೇ ಆಗಿದ್ದು, ಪರೀಕ್ಷೆಯ ಬಳಿಕ ವಿದ್ಯಾರ್ಥಿಗಳು ಮೇಲ್ವಿಚಾರಕರಿಗೆ ಹಿಂದಿರುಗಿಸಬೇಕು.
ಎಲ್ಲಾ ವಿದ್ಯಾರ್ಥಿಗಳು ಡೆಸ್ಕ್ ಬೆಂಚ್ ಮೇಲೆ ಕೂರಲು ವ್ಯವಸ್ಥೆ ಮಾಡಲಾಗಿದ್ದು, ಶೌಚಾಲಯ, ಕುಡಿಯುವ ನೀರಿಗೂ ಅನುಕೂಲ ಕಲ್ಪಿಸಲಾಗಿದೆ.
ಉತ್ತಮ ಫಲಿತಾಂಶ ಬರುವ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಪೂರ್ವ ಸಿದ್ಧತೆಗಳನ್ನೂ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ವಿಷಯಕೂಟ, ವಿದ್ಯಾರ್ಥಿ ಸಂವಾದ, ವಿಶೇಷ ತರಗತಿಗಳನ್ನು ನಡೆಸಿ ಪ್ರೋತ್ಸಾಹಿಸಲಾಗಿದೆ. ಇದಲ್ಲದೆ 4 ಪೂರ್ವ ಸಿದ್ದತಾ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ನಾಗೇಶ್ ಹೇಳಿದ್ದಾರೆ.