ತರೀಕೆರೆ ಕ್ಷೇತ್ರ: ಕೈ ಬಿಡದ ಮತದಾರ
ಆರ್. ತಾರಾನಾಥ್
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ. 30
ಮೂರು ಜಿಲ್ಲೆಗಳ ಗಡಿ ಭಾಗದ ಕಾಫಿಯ ತವರೂರಿನ ಹೆಬ್ಬಾಗಿನಲ್ಲಿರುವ ತರೀಕೆರೆ ವಿಧಾನಸಭಾ ಕ್ಷೇತ್ರ ಭೌಗೋಳಿಕವಾಗಿ ಒಂದೇ ರೂಪ ಹೊಂದಿಲ್ಲ.
ನೆರೆಯ ಮೂರು ಜಿಲ್ಲೆಗಳು ಯಾವ ಯಾವ ಗುಣಲಕ್ಷಣವನ್ನು ಹೊಂದಿದಿಯೋ, ತರೀಕೆರೆ ಕ್ಷೇತ್ರವೂ ಕೂಡ ಅದೇ ರೀತಿಯಲ್ಲಿದೆ. ಒಂದೆಡೆ ಭದ್ರಾ ನದಿಯ ನೀರಿನ ಬಳಕೆಯಿಂದ ಸಮೃದ್ಧವಾದ ಬೆಳೆ, ಇನ್ನೊಂದೆಡೆ ಅಡಿಕೆ ಮತ್ತು ತೆಂಗು ಬೆಳೆಯುವ ಪ್ರದೇಶ, ಮತ್ತೊಂದೆಡೆ ಸದಾ ಬರಗಾಲಕ್ಕೆ ತುತ್ತಾಗುವ ಪ್ರದೇಶಗಳು ಇಲ್ಲಿವೆ.
ಇದು, ಭೌಗೋಳಿಕವಾಗಿ ಎಷ್ಟು ವೈವಿಧ್ಯವೋ, ರಾಜಕೀಯವಾಗಿಯೂ ಕೂಡ ಅಷ್ಟೇ ವಿಭಿನ್ನವಾಗಿದೆ. ಜಿಲ್ಲೆಯ ಫಲಿತಾಂಶವನ್ನು ಗಣಿತ ಲೆಕ್ಕಚಾರದ ಮೂಲಕ ನೂರಕ್ಕೆ ನೂರರಷ್ಟು ಅಲ್ಲದೆ ಹೋದರೂ ಶೇ.80 ರಷ್ಟಾದರೂ ಹೇಳಬಹುದು. ಆದರೆ, ತರೀಕೆರೆ ಕ್ಷೇತ್ರದ ಮತದಾರರನ್ನು ಚುನಾವಣೆಯ ಕೊನೆಯ ಗಳಿಗೆವರೆಗೆ ಲೆಕ್ಕ ಹಾಕಲು ಸಾಧ್ಯವೇ ಇಲ್ಲ. ಅದೇಷ್ಟೋ ಬಾರಿ ಊಹೆ ತಿರುವು, ಮುರುವು ಆಗಿದೆ.
ಜಾತಿ ಲೆಕ್ಕಾಚಾರ: ಇದಕ್ಕೆಲ್ಲಾ ಕಾರಣ ಜಾತಿ, ಇಲ್ಲಿ ಪ್ರಬಲವಾಗಿರುವುದು ಎರಡೇ ಜಾತಿ, ಒಂದು- ಲಿಂಗಾಯತ, ಎರಡು- ಕುರುಬರು, ಈವರೆಗೆ ನಡೆದಿರುವ 14 ವಿಧಾನಸಭಾ ಚುನಾವಣೆಯಲ್ಲಿ ಇವೆರಡು ಜಾತಿಯವರೇ ಗೆಲವು ಸಾಧಿಸುತ್ತಾ ಬಂದಿದ್ದಾರೆ. ಅದರಲ್ಲಿ ಲಿಂಗಾಯತ ಸಮುದಾಯದ ಒಳಪಂಗಡಗಳಾದ ನೋಳಂಬ ಮತ್ತು ಸಾಧು ವೀರಶೈವರು ಇಲ್ಲಿ ಪ್ರಮುಖವಾಗಿ ಪಾತ್ರ ವಹಿಸುತ್ತವೆ. ಒಮ್ಮೆ ನೋಳಂಬದವರು ಶಾಸಕರಾದರೆ, ಮುಂದಿನ ಅವಧಿಗೆ ಸಾಧು ವೀರಶೈವರಿಗೆ ಅವಕಾಶ ನೀಡಬೇಕೆಂಬುವುದನ್ನು ಆ ಸಮುದಾಯದವರು ತೋರಿಸಿಕೊಟ್ಟಿದ್ದಾರೆ.
ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಚುನಾವಣೆ ನಡೆದಿದ್ದು 1952ರಲ್ಲಿ. ಪ್ರಥಮ ಚುನಾವಣೆಯಲ್ಲಿ ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಟಿ. ನಾಗಪ್ಪ ಜಯಗಳಿಸಿದರು. ಅವರು ಸ್ಪರ್ಧೆ ಮಾಡಿದ್ದು ಕೆಎಂಪಿಪಿ ಪಕ್ಷದಿಂದ, ಈ ಕ್ಷೇತ್ರದಲ್ಲಿ ಮೊದಲು ಖಾತೆ ತೆರೆದ ಪಕ್ಷದ ಕೀರ್ತಿ ಕೆಎಂಪಿಸಿಗೆ ಸಲ್ಲುತ್ತದೆ. ಟಿ. ನಾಗಪ್ಪ ಅವರು 8093 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದ ಟಿ.ಸಿ. ಬಸಪ್ಪ ಪಡೆದ ಮತ 8059. ಅಂದರೆ ಕೇವಲ 34 ಮತಗಳ ಅಂತರದಲ್ಲಿ ಸೋಲು- ಗೆಲವು ನಿರ್ಧಾರವಾಯಿತು. ಮರು ಎಣಿಕೆ ನಡೆಸಲಾಯಿತು. ಅಷ್ಟಕ್ಕೆ ಅಭ್ಯರ್ಥಿಗಳು ಸುಮ್ಮನಿರಲಿಲ್ಲ. ಇದು, ನ್ಯಾಯಾಲಯದ ಮೆಟ್ಟಿಲು ಸಹ ಏರಿತು.
9 ಬಾರಿ ಗೆಲವು: ತರೀಕೆರೆ ಕ್ಷೇತ್ರದಲ್ಲಿ 14 ಬಾರಿ ವಿಧಾನಸಭಾ ಚುನಾವಣೆಗಳು ನಡೆದಿವೆ. ಇಲ್ಲಿ ಗೆದ್ದಿರುವ ಅಭ್ಯರ್ಥಿಗಳನ್ನು ಪಕ್ಷವಾರು ವಿಂಗಡಿಸಿದರೆ ಕಾಂಗ್ರೆಸ್ ಅತೀ ಹೆಚ್ಚು ಅಂದರೆ 9 ಬಾರಿ ಗೆಲವು ಸಾಧಿಸಿದೆ. ಇನ್ನುಳಿದಂತೆ ಅವಧಿಯಲ್ಲಿ ಇಲ್ಲಿನ ಮತದಾರರು ಕೆಎಂಪಿಪಿ, ಪಿಎಸ್ಪಿ, ಜನತಾಪಕ್ಷ ಹಾಗೂ ಕಳೆದ ಅವಧಿಯಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿದ್ದಾರೆ. ಇಷ್ಟೆ ಅಲ್ಲಾ, 1994ರಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಸಹ ಗೆಲ್ಲಿಸಿ ಎಲ್ಲಾ ಪಕ್ಷಗಳಿಗೂ ಅವಕಾಶ ನೀಡಿದ್ದಾರೆ.
ಹೆಚ್ಚು ಮಂದಿ ಸ್ಪರ್ಧೆ: ಜಿಲ್ಲೆಯ ಇತರೆ 4 ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಕೆ ಮಾಡಿದರೆ ತರೀಕೆರೆ ಕ್ಷೇತ್ರದಲ್ಲಿ ರಾಜಕೀಯದ ಬಗ್ಗೆ ಆಸಕ್ತಿ ಇರುವ ಜನರೇ ಹೆಚ್ಚು.
ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಸ್ಥಳೀಯ ಸಂಸ್ಥೆಗಳು ಹಾಗೂ ಇತರೆ ಯಾವುದೇ ಚುನಾವಣೆಗಳು ನಡೆಯಲಿ ಇಲ್ಲಿ ಹೆಚ್ಚು ಮಂದಿ ಸ್ಪರ್ಧೆ ಮಾಡುತ್ತಾರೆ. ಅಲ್ಲಿ ಚುನಾವಣಾ ಪ್ರಚಾರದ ಭರಟೆ ಜೋರಾಗಿರುತ್ತದೆ.
ಪಕ್ಷದಿಂದ ಟಿಕೆಟ್ ಕೋರಿ ಜಿಲ್ಲಾ ಕಾಂಗ್ರೆಸ್ಗೆ ಬಂದ ಅರ್ಜಿಗಳ ಪೈಕಿ ತರೀಕೆರೆ ಕ್ಷೇತ್ರಗಳದ್ದೇ ಅಧಿಕ. ಈ ಕ್ಷೇತ್ರದಲ್ಲಿ ಕೆಜೆಪಿಯಿಂದ ಡಿ.ಎಸ್. ಸುರೇಶ್ ಅವರು ಸ್ಪರ್ಧೆ ಮಾಡಲಿದ್ದು, ಈಗಾಗಲೇ ಅವರ ಹೆಸರು ಪಕ್ಷ ಪ್ರಕಟ ಮಾಡಿದೆ.
ಇನ್ನುಳಿದ ಪಕ್ಷದವರು ಈವರೆಗೆ ತಮ್ಮ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿಲ್ಲ. ಅದುದರಿಂದ ಇತರೆ ಪಕ್ಷಗಳ ಆಕಾಂಕ್ಷಿಗಳ ಸ್ಪಷ್ಟವಾದ ಚಿತ್ರಣ ಹೊರ ಬರುವವರೆಗೆ ಆಕಾಂಕ್ಷಿಗಳ ಹೆಸರು ಗಾಳಿಯಲ್ಲಿ ತೇಲಿ ಬಿಡಲಾಗುತ್ತಿದೆ.
ಒಟ್ಟಾರೆ ತರೀಕೆರೆ ವಿಧಾನಸಭಾ ಕ್ಷೇತ್ರದ ಚುನಾವಣೆ ತುಂಬಾ ವೈವಿಧ್ಯಮಯ.
ಗೆದ್ದ ಅಭ್ಯರ್ಥಿಗಳ ವಿವರ
1952 ಟಿ. ನಾಗಪ್ಪ (ಕೆಎಂಪಿಪಿ)
1957 ಟಿ.ಆರ್. ಪರಮೇಶ್ವರಯ್ಯ (ಕಾಂಗ್ರೆಸ್)
1962 ಟಿ.ಆರ್. ಪರಮೇಶ್ವರಯ್ಯ (ಕಾಂಗ್ರೆಸ್)
1967 ಹಂಜಿ ಶಿವಣ್ಣ (ಪಿಎಸ್ಪಿ)
1972 ಹಂಜಿ ಶಿವಣ್ಣ (ಕಾಂಗ್ರೆಸ್)
1978 ಎಚ್.ಎಂ. ಮಲ್ಲಿಕಾರ್ಜುನಪ್ಪ (ಕಾಂಗ್ರೆಸ್)
1983 ಎಚ್.ಆರ್. ರಾಜು (ಕಾಂಗ್ರೆಸ್)
1985 ಬಿ.ಆರ್. ನೀಲಕಂಠಪ್ಪ (ಜೆಎನ್ಪಿ)
1989 ಎಚ್.ಆರ್. ರಾಜು (ಕಾಂಗ್ರೆಸ್)
1994 ಎಸ್.ಎಂ. ನಾಗರಾಜ್ (ಪಕ್ಷೇತರ)
1999 ಬಿ.ಆರ್. ನೀಲಕಂಠಪ್ಪ (ಕಾಂಗ್ರೆಸ್)
2004 ಟಿ.ಎಚ್. ಶಿವಶಂಕರಪ್ಪ (ಕಾಂಗ್ರೆಸ್)
2008 ಡಿ.ಎಸ್. ಸುರೇಶ್ (ಬಿಜೆಪಿ)