ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಿಎಸ್ವೈ ಒನ್ ಮ್ಯಾನ್ ಆರ್ಮಿ

Rashmi Kasaragodu
Updated On : 31 Mar 2013, 12:27 pm

ಶ್ರೀಕಾಂತ ಭಟ್
ಕ.ಪ್ರ ವಾರ್ತೆ, ಶಿವಮೊಗ್ಗ, ಮಾ. 30
ಅವರು ಪಕ್ಷದ ಅಗ್ರ ಪಂಕ್ತಿ ನಾಯಕ, ಆ ಪಕ್ಷದ ಏಕೈಕ ಸ್ಟಾರ್ ಕ್ಯಾಂಪೇನರ್, ಜೊತೆಗೆ ಚುನಾವಣಾ ಸ್ಪರ್ಧಿಕೂಡ. ಅಷ್ಟೇ ಅಲ್ಲ, ರಾಜ್ಯದ ತುಂಬೆಲ್ಲಾ ಅಭ್ಯರ್ಥಿಗಳನ್ನು ಹುಡುಕಿ ಟಿಕೆಟ್ ಅಂತಿಮಗೊಳಿಸುವುದೂ ಅವರೇ.
ಹೀಗೆ ಒಂದೇ ವ್ಯಕ್ತಿ ಹಲವು ರೋಲ್ಗಳಲ್ಲಿ ಮೆರೆಯುವ, ಸಂಕಟ ಅನುಭವಿಸುವ ಅವಕಾಶ ಬಂದಿರುವುದು ಕೆಜೆಪಿ ಕಟ್ಟಿದ ಬಿ.ಎಸ್.ಯಡಿಯೂರಪ್ಪನವರಿಗೆ.
ಇಷ್ಟು ವರ್ಷಗಳವರೆಗೆ ವಿಶಾಲ ಸಂಘಟನೆ ಹಾಗೂ ಸಂಘಟನೆಯ ಮೇರು ಮುಖಂಡರು ಮಾಡುತ್ತಿದ್ದ ಕೆಲಸವನ್ನು ತಮ್ಮ ಮೇಲೆ ಹೊತ್ತುಕೊಳ್ಳುವ ಪರಿಸ್ಥಿತಿ ಈಗ ಯಡಿಯೂರಪ್ಪನವರಿಗೆ ಬಂದೊದಗಿದೆ. ಪರಿಣಾಮ, 70ರ ಹರೆಯದ ಬಿಎಸ್ವೈ ಈಗ ಹುಚ್ಚುಕುದುರೆ. ನಿಂತಲ್ಲಿ ನಿಲ್ಲದೆ, ಕುಳಿತಲ್ಲಿ ಒಂದು ನಿಮಿಷ ಕೂರದೇ ಅಲೆದಾಟ ಆರಂಭಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಮುಂಚೆಯೇ ಬಿ.ಎಸ್.ಯಡಿಯೂರಪ್ಪನವರು ತಮ್ಮ ಸ್ವಕ್ಷೇತ್ರದ ಬಹುತೇಕ ಭಾಗವನ್ನು ಸುತ್ತಿಬಂದಿದ್ದಾಗಿದೆ. ಬುಧವಾರ ಹಾಗೂ ಗುರುವಾರ ಎರಡು ದಿನಗಳ ಪ್ರಚಾರವನ್ನೇ ತೆಗೆದುಕೊಂಡರೆ ದಿನಮೊಂದಕ್ಕೆ ಕನಿಷ್ಟ 14ರಿಂದ 15ಗಂಟೆ ಕಾಲ 18ರಿಂದ 20 ಗ್ರಾಮಾಂತರ ಪ್ರಚಾರ ಸಭೆ ನಡೆಸಿದ್ದಾರೆ. ತಡ ರಾತ್ರಿ ವರೆಗೆ ಮುಖಂಡರ ಸಭೆ ನಡೆಸಿ ಕಾರ್ಯತಂತ್ರ ಹೆಣೆದಿದ್ದಾರೆ.
ಏಕೈಕ ಸ್ಟಾರ್ ಕ್ಯಾಂಪೇನರ್
ಕೆಜೆಪಿಯ ಏಕೈಕ ಸ್ಟಾರ್ ಕ್ಯಾಂಪೇನರ್ ಬಿ.ಎಸ್.ಯಡಿಯೂರಪ್ಪ. ಈ ಅಂಶ ಕೂಡ ಎದುರಾಳಿ ಬಿಜೆಪಿಗೆ ಸಮಾಧಾನದ ವಿಷಯ.
ತಮ್ಮ ಸ್ವಕ್ಷೇತ್ರದಲ್ಲಿ ಪ್ರಚಾರ ಮಾಡುವ ಜೊತೆಗೆ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಅಭ್ಯರ್ಥಿಗಳ ಪರ ಮತ ಯಾಚನೆ ಮಾಡುವ ಅನಿವಾರ್ಯತೆ ಯಡಿಯೂರಪ್ಪನವರಿಗೆ ಬಂದೊದಗಿದೆ. ಹೀಗಾಗಿಯೇ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿರುವ ಬಿಎಸ್ವೈ ಒತ್ತಡದಲ್ಲಿ ಸಿಲುಕಿದ್ದಾರೆ.
ಪಕ್ಷದ ನಾಯಕಿ ಶೋಭಾ ಕರಂದ್ಲಾಜೆ ಅವರು ತಮ್ಮ ಕ್ಷೇತ್ರ ರಾಜಾಜಿನಗರದಲ್ಲಿ ನೆಲೆ ಗಟ್ಟಿಗೊಳಿಸುವಲ್ಲೇ ಸಮಯ ಕಳೆಯುತ್ತಿದ್ದಾರೆ. ಇನ್ನು ಸಂಸದ ಬಿವೈ ರಾಘವೇಂದ್ರ ಕೆಜೆಪಿ ಸಂಘಟನೆಯಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳದ ಪರಿಣಾಮ ಪ್ರತಿ ವೇದಿಕೆ ಹತ್ತಿಳಿಯುವ ಅನಿವಾರ್ಯತೆ ಯಡಿಯೂರಪ್ಪನವರದ್ದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement