ಮೂಢನಂಬಿಕೆಯಿಂದ ಹೆಣ್ಣು ಭ್ರೂಣ ಹತ್ಯೆ
ಕ.ಪ್ರ ವಾರ್ತೆ, ನರಸಿಂಹರಾಜಪುರ, ಮಾ.30
ಕುಟಂಬದಲ್ಲಿ ಗಂಡು ಮಕ್ಕಳಿದ್ದರೆ ಮಾತ್ರ ಮೋಕ್ಷ ದೊರೆಯುತ್ತದೆ ಎಂಬ ಮೂಢನಂಬಿಕೆಯಿಂದ ಹೆಣ್ಣು ಭ್ರೂಣವನ್ನು ಹತ್ಯೆ ಮಾಡಲಾಗುತ್ತದೆ ಎಂದು ನ್ಯಾಯಧೀಶ ವೀರಭದ್ರಯ್ಯ ತಿಳಿಸಿದರು.
ಅವರು ಶನಿವಾರ ಸಾಮರ್ಥ್ಯ ಸೌಧದಲ್ಲಿ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ತಾಲೂಕು ಮಟ್ಟದ ಸ್ವಸಹಾಯ ಗುಂಪುಗಳಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಗರ್ಭಪೂರ್ವ, ಪ್ರಸವ, ಭ್ರೂಣ ಲಿಂಗ ಪತ್ತೆ ಶಾಸನ ಕುರಿತು ನಡೆದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಗರ್ಭದಲ್ಲಿ ಇರುವ ಮಗುವಿನ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಈ ಶಾಸನ ತರಲಾಗಿದೆ. ಈ ಕಾನೂನನ್ನು ಯಾರೂ ದುರುಪಯೋಗ ಪಡೆದುಕೊಳ್ಳಬಾರದು. ಹೆಣ್ಣು ಭ್ರೂಣ ಹತ್ಯೆಯಿಂದ ದೇಶದಲ್ಲಿ ಹೆಣ್ಣಿನ ಅನುಪಾತ ಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಠಿಣ ಕಾನೂನು ಬೇಕು: ತಾಲೂಕು ವೈದ್ಯಾಧಿಕಾರಿ ಡಿ. ಸೀಮಾ ಮಾಹಿತಿ ನೀಡಿದರು.
ತಾಲೂಕು ಪಿ.ಸಿ ಮತ್ತು ಪಿ.ಎನ್.ಡಿ.ಟಿ ಸಮಿತಿ ಸದಸ್ಯೆ ಮೀನಾಕ್ಷಿ ಕಾಂತರಾಜ್ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ದ್ವಿತೀಯ ಪ್ರಜೆಯಾಗಿದ್ದಾಳೆ. ಮಹಿಳೆ ಸಮಾಜದ ದೊಡ್ಡ ಶಕ್ತಿಯಾಗಿದ್ದು ಇದನ್ನು ಮಹಿಳೆ ಅರ್ಥ ಮಾಡಿಕೊಳ್ಳಬೇಕಾಗಿದೆ. ಮಹಿಳೆ ಮನೆಗೆ ಮಾತ್ರ ಸೀಮಿತವಾಗಿರದೆ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ದ್ವನಿ ಎತ್ತಿ ಪ್ರತಿಭಟಿಸಬೇಕಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ತಹಸೀಲ್ದಾರ್ ಕೃಷ್ಣಮೂರ್ತಿ ವಹಿಸಿದ್ದರು. ಅತಿಥಿಗಳಾಗಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಅರುಣ್, ತಾಲೂಕು ಪಂಚಾಯ್ತಿಯ ರಾಜೇಗೌಡ, ಸರ್ಕಾರಿ ಆಸ್ಪತ್ರೆಯ ನೇತ್ರ ತಜ್ಞೆ ಡಾ. ಸೌಮ್ಯ, ಶೇರ್ ಸಂಸ್ಥೆ ಅಧ್ಯಕ್ಷ ವರ್ಗೀಸ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿ ಅಭಿನವ ಗಿರಿರಾಜ್ ಮಾತನಾಡಿದರು. ಗಾಯಿತ್ರಿ ಪ್ರಾರ್ಥಿಸಿ, ಆರೋಗ್ಯ ಶಿಕ್ಷಣಾಧಿಕಾರಿ ಲಲಿತಾ ಸ್ವಾಗತಿಸಿದರು. ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿ, ವರ್ಗೀಸ್ ವಂದಿಸಿದರು.