ರಾಜಕೀಯ ಪಕ್ಷಗಳ ಮುಖಂಡರ ಚುನಾವಣಾ ಪೂರ್ವಭಾವಿ ಸಭೆ
ಕ.ಪ್ರ ವಾರ್ತೆ, ಕಡೂರು, ಮಾ.30
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಡೂರು ಪಟ್ಟಣದಲ್ಲಿ ಆರಕ್ಷಕ ಇಲಾಖೆಯಿಂದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಚುನಾವಣಾ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.
ಕಡೂರು ಪೊಲೀಸ್ ಠಾಣೆಯಲ್ಲಿ ನಡೆದ ಸಭೆಯಲ್ಲಿ ತರೀಕೆರೆ ಡಿವೈಎಸ್ಪಿ ಸದಾನಂದ ನಾಯಕ್ ರಾಜಕೀಯ ಮುಖಂಡರನ್ನು ಉದ್ದೇಶಿಸಿ ಮಾತನಾಡಿ, ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣಾ ಸಮಯದಲ್ಲಿ ಅಭ್ಯರ್ಥಿಗಳು ವೈಯಕ್ತಿಕವಾಗಿ ಅಥವಾ ವ್ಯಕ್ತಿಗತವಾಗಿ ಯಾರನ್ನೇ ಕುರಿತು ಟೀಕೆ ಮಾಡುವಂತಿಲ್ಲ. ಯಾವುದೇ ವ್ಯಕ್ತಿ ಅಥವಾ ವರ್ಗವನ್ನು ಧಾರ್ಮಿಕವಾಗಿ ಟೀಕೆ ಮಾಡುವಂತಿಲ್ಲ ಅಥವಾ ಧರ್ಮದ ಆಧಾರದ ಮೇಲೆ ಮತ ಕೇಳುವುದು ಮತ್ತು ಕೋಮು ಭಾವನೆ ಕೆರಳಿಸುವ ಪ್ರಚೋದನಕಾರಿ ಭಾಷಣ ಮಾಡುವುದು, ಹಣ ಕೊಡುವುದು ಮತ್ತು ತೆಗೆದುಕೊಳ್ಳುವುದು ನೀತಿಸಂಹಿತೆಗೆ ವಿರೋಧವಾಗಿದೆ ಎಂದರು.ಸಭೆಗೆ ಅವಕಾಶವಿಲ್ಲ: ಕಡೂರು ವೃತ್ತ ನೀರೀಕ್ಷಕ ಬಾಲಚಂದ್ರೇಗೌಡ ಮಾತನಾಡಿ, ಯಾವುದೇ ರಾಜಕೀಯ ಪಕ್ಷವಾಗಲಿ ಪಕ್ಷದ ಸಭೆಗಳನ್ನು ನಡೆಸುವುದಾದರೆ ಸ್ಥಳೀಯ ಚುನಾವಣಾ ಸಮಿತಿಯಿಂದ ಅನುಮತಿ ಪಡೆದು ಚುನಾವಣಾ ಆಯೋಗ ನಿಗಧಿಪಡಿಸಿರುವ ಶುಲ್ಕ ಪಾವತಿಸಿ ಪೊಲೀಸ್ ಇಲಾಖೆಗೆ ಸಭೆಯ ಮಾಹಿತಿ ನೀಡಬೇಕು. ಧಾರ್ಮಿಕ ಕೇಂದ್ರಗಳು ಮತ್ತು ಶಾಲೆಗಳ ಸಮೀಪ ಸಭೆಗಳನ್ನು ಏರ್ಪಡಿಸುವುದಕ್ಕೆ ಅವಕಾಶವಿಲ್ಲ. ಈ ಹಿಂದಿನ ಚುನಾವಣೆಗಳಲ್ಲಿ ಯಾವುದೇ ರೀತಿಯ ಆಹಿತಕರ ಘಟನೆಗಳು ನಡೆದಿಲ್ಲ. ಅದೇ ರೀತಿ ಈ ಭಾರಿಯೂ ಪಕ್ಷದ ಮುಖಂಡರು, ಸಾರ್ವಜನಿಕರು ಶಾಂತಿಯುತ ಚುನಾವಣೆ ನಡೆಯಲು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಬೀರೂರು ವೃತ್ತ ನಿರೀಕ್ಷಕ ಎಸ್.ಪಿ. ಮಂಜಪ್ಪ, ಪೊಲೀಸ್ ಸಬ್ಇನ್ಸ್ಪೆಕ್ಟರ್ಗಳಾದ ಶಿವಲಿಂಗಯ್ಯ, ಗೀತಾಬಾಯಿ, ಇಲಾಖೆಯ ಅಧಿಕಾರಿ ಸಿಬ್ಬಂದಿ ಇದ್ದರು.