ಎಲ್ಲರಿಗೂ ಅವಕಾಶ ನೀಡಿದ ಕಡೂರು ಮತದಾರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು, ಮಾ. 31
ಪ್ರತಿ ವರ್ಷ ಬರಗಾಲಕ್ಕೆ ತುತ್ತಾಗುತ್ತಿರುವ ಕಡೂರು ವಿಧಾನಸಭಾ ಕ್ಷೇತ್ರ. ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿದೆ. ಇದು, ಕುಡಿಯುವ ನೀರಿನ ಹಾಹಾಕಾರದ ಜತೆಗೆ ಮೂಲಭೂತ ಸೌಲಭ್ಯದ ಕೊರತೆಯನ್ನು ಸಹ ಎದುರಿಸುತ್ತಿದೆ.
ಈ ಕ್ಷೇತ್ರದ ಮತದಾರರು ಯಾವುದೇ ಒಂದು ರಾಜಕೀಯ ಪಕ್ಷದ ಮುಷ್ಠಿಯಲ್ಲಿ ಇಲ್ಲ. ರಾಷ್ಟ್ರ ಮತ್ತು ರಾಜ್ಯದ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸಿದರೂ ಇಲ್ಲಿಯ ಮತದಾರರ ಮೇಲೆ ಪರಿಣಾಮ ಬೀರಿಲ್ಲ ಎಂಬುದು 1952 ರಿಂದ 2010ರ ವರೆಗೆ ನಡೆದಿರುವ ವಿಧಾನಸಭಾ ಚುನಾವಣೆಯ ಫಲಿತಾಂಶ ಹೇಳುತ್ತದೆ.
ಎಲ್ಲರಿಗೂ ಅವಕಾಶ: ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಈ ವರೆಗೆ 14 ಚುನಾವಣೆಗಳು ನಡೆದಿವೆ. ಕಾಂಗ್ರೆಸ್ 6 ಬಾರಿ, ಜನತಾದಳ ಮತ್ತು ಜೆಡಿಎಸ್ 3 ಬಾರಿ, ಪಿಎಸ್ಪಿ, ಜೆಎನ್ಪಿ, ಬಿಜೆಪಿ ತಲಾ ಒಂದೊಂದು ಬಾರಿ ಜಯಗಳಿಸಿವೆ. ಪಕ್ಷೇತರರು 2 ಬಾರಿ ಜಯಗಳಿಸಿದ್ದಾರೆ. ಅಂದರೆ ಎಲ್ಲಾ ರಾಜಕೀಯ ಪಕ್ಷಗಳು ಇಲ್ಲಿ ಗೆಲವು ಸಾಧಿಸಿವೆ.
ಈ ಕ್ಷೇತ್ರದಲ್ಲಿ ಕಡೂರು ಕೃಷ್ಣಮೂರ್ತಿ ಅವರು ಸತತವಾಗಿ ನಾಲ್ಕು ಬಾರಿ ಗೆಲವು ಸಾಧಿಸಿದ್ದರು. ಅವರು ಪಕ್ಷ ಬದಲಾವಣೆ ಮಾಡಿದರೂ ಮತದಾರರು ಮಾತ್ರ ಅವರನ್ನು ಕೈಬಿಟ್ಟಿರಲಿಲ್ಲ. ಅವರು 1994ರಲ್ಲಿ ಜನತಾದಳದಿಂದ ಸ್ಪರ್ಧೆ ಮಾಡಿ ಜಯಗಳಿಸಿದ್ದರು, ಬಳಿಕ 1999ರಲ್ಲಿ ಹಾಗೂ 2004ರಲ್ಲಿ ಜೆಡಿಎಸ್ನಿಂದ ಸ್ಪರ್ಧೆ ಮಾಡಿದಾಗಲೂ ಜಯಗಳಿಸಿದ್ದರು. 2008ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದರು. ಆಗಲೂ ಕೂಡ ಗೆಲವು ಅವರದ್ದೇಯಾಗಿತ್ತು. ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಸತತವಾಗಿ ಗೆಲವು ಸಾಧಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
1952ರಲ್ಲಿ ನಡೆದ ಮೊಟ್ಟ ಮೊದಲ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಖಾತೆಯನ್ನು ತೆರೆಯಿತು. 1957ರಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಆದರೆ, ನಂತರ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ ಈ ಕ್ಷೇತ್ರವನ್ನು ಕಳೆದುಕೊಂಡಿತ್ತು. ನಂತರದ ಚುನಾವಣೆಯಲ್ಲಿ ಇತರೆ ಪಕ್ಷದವರು ಗೆಲವು ಸಾಧಿಸಿದ್ದರು.
ಬಿಜೆಪಿಗೆ ಚಾನ್ಸ್: 2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಎಂ. ಕೃಷ್ಣಮೂರ್ತಿ ಅವರು ಗೆಲವು ಸಾಧಿಸುವುದರ ಮೂಲಕ ಸೋಲಿಲ್ಲದ ಸರದಾರ ಎಂದೆನಿಸಿಕೊಂಡಿದ್ದರು.
ಈ ಚುನಾವಣೆ ನಡೆದ ಎರಡೂವರೆ ವರ್ಷದ ಬಳಿಕ ಅವರು ಅನಾರೋಗ್ಯದಿಂದ ನಿಧನರಾದರು. 2010ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲವು ಸಾಧಿಸಿತು.
ಬಿಜೆಪಿ ಅಭ್ಯರ್ಥಿ ಡಾ. ವೈ.ಸಿ. ವಿಶ್ವನಾಥ್ ಅವರು ಮೂರು ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸಿದರು. ಆಗ ಜೆಡಿಎಸ್ ಅಭ್ಯರ್ಥಿ ವೈಎಸ್ವಿ ದತ್ತ ಅವರು ಎರಡನೇ ಸ್ಥಾನದಲ್ಲಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ ಕುಸಿಯಿತು.
ಬಹಳ ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕಡೂರು ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿರುವುದು. ಆ ಪಕ್ಷಕ್ಕೆ ಜಿಲ್ಲೆಯಲ್ಲಿ ಮತ್ತಷ್ಟು ಬಲವನ್ನು ತಂದುಕೊಟ್ಟಿತ್ತು. ಈ ಫಲಿತಾಂಶದ ನಂತರದಲ್ಲಿ ಜಿಲ್ಲೆಯ ಐದೂ ಕ್ಷೇತ್ರಗಳು ಬಿಜೆಪಿಯ ಮಡಿಲಿಗೆ ಸೇರಿಕೊಂಡವು.
2010, ಆಗ ರಾಜ್ಯ ಬಿಜೆಪಿಯಲ್ಲಿ ಯಾವುದೇ ಗೊಂದಲ, ಆಂತರಿಕ ಬಿಕ್ಕಟ್ಟು ಇರಲಿಲ್ಲ. ಎಲ್ಲರ ಶ್ರಮದ ಫಲವಾಗಿ ಬಿಜೆಪಿ ಗೆಲವು ಸಾಧಿಸಿತು. ಆದರೆ, ಕಳೆದ ಎರಡೂವರೆ ವರ್ಷಗಳಲ್ಲಿ ಕಡೂರು ಕ್ಷೇತ್ರದ ಬಗ್ಗೆ ರಾಜ್ಯ ಸರ್ಕಾರ ತಾಳಿರುವ ನಿರ್ಲಕ್ಷೆಯನ್ನು ಸ್ವತಹ ಶಾಸಕ ಡಾ. ವೈ.ಸಿ. ವಿಶ್ವನಾಥ್ ಅವರೇ ಹೊರ ಹಾಕಿದ್ದು, ಈ ಕಾರಣದಿಂದಲೇ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ.
ಬದಲಾವಣೆ: ಸತತವಾಗಿ ನಾಲ್ಕು ಬಾರಿ ಗೆಲವು ಸಾಧಿಸಿದ್ದ ಕೆ.ಎಂ. ಕೃಷ್ಣಮೂರ್ತಿ ಅವರು ನಿಧನರಾದ ನಂತರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಅವರ ಸಹೋದರ ಕೆ.ಎಂ. ಕೆಂಪರಾಜ್ ಸ್ಪರ್ಧೆ ಮಾಡಿದ್ದರೂ ಕೂಡ ಮತದಾರರು ಅವರನ್ನು ಒಪ್ಪಿಕೊಂಡಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಕಮಲಕ್ಕೆ ಅದೃಷ್ಟದ ಬಾಗಿಲು ತೆರೆಯಿತು. ಆದರೆ, ಎರಡೂವರೆ ವರ್ಷ ಸಿಕ್ಕ ಅವಕಾಶವನ್ನು ಬಿಜೆಪಿಗೆ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ 2013ರ ಮೇ 5 ರಂದು ನಡೆಯಲಿರುವ ಕಡೂರು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಯಾವ ಪಕ್ಷದ ಕೈ ಹಿಡಿಯುತ್ತಾರೆ ನೋಡಬೇಕಾಗಿದೆ.
-ಆರ್. ತಾರಾನಾಥ್