'ಕಾಲಜ್ಞಾನಕ್ಕಾಗಿ ಸಾಹಿತ್ಯ, ಕಾವ್ಯ'
ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಮಾ. 31
ಸಾಹಿತ್ಯ, ಕಾವ್ಯ ಕಾಲಹರಣಕ್ಕಾಗಿ ಇರಬಾರದು. ಅದು, ಕಾಲಜ್ಞಾನಕ್ಕಾಗಿ ಇರಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದ್ದಾರೆ.
ನಗರದ ಗೃಹಮಂಡಳಿ ಬಡಾವಣೆಯಲ್ಲಿರುವ ಗಣಪತಿ ದೇವಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇತ್ತೀಚೆಗೆ ಏರ್ಪಡಿಸಿದ್ದ ದತ್ತಿ ಉಪನ್ಯಾಸದಲ್ಲಿ ಮಾತನಾಡಿದ ಅವರು, ಸಾಹಿತ್ಯವೆಂದರೆ ಕೇವಲ ಕಥೆ, ಕಾದಂಬರಿಗಳಲ್ಲ, ಜೀವನಾನುಭ ಎಂದರು.
ಹಾಸ್ಯ ಚಟಾಕಿ ಹೇಳಿ: ಅಮ್ಮ ಎಂದರೆ ಅವ್ವ. ಮಮ್ಮಿ ಎಂದರೆ ದೆವ್ವ, ನಮಗೆ ಮಮ್ಮಿ ಡ್ಯಾಡಿ ಸಂಸ್ಕೃತಿ ಬೇಡ. ಮಕ್ಕಳನ್ನು ಮುದ್ದಾಡುವುದನ್ನು ಬಿಟ್ಟು ಗುದ್ದಾಡುವುದಕ್ಕೆ ಪ್ರೋತ್ಸಾಹ ನೀಡುತ್ತಿದ್ದೇವೆ. ಮಕ್ಕಳಿಗೆ ಹಾಸ್ಯ ಚಟಾಕಿ, ಕೆಲವು ಒಗಟು ಹೇಳಿ ಎಂದರು.
ಕನ್ನಡ ಕಾವ್ಯದ ಕಣ್ಮಣಿಗಳಾದ ಮಹಾಕವಿ ಕುಮಾರವ್ಯಾಸ ಗದುಗಿನವನಾದರೆ, ಮಹಾ ಕವಿ ಲಕ್ಷ್ಮೀಶ ನಮ್ಮ ಜಿಲ್ಲೆಯ ದೇವನೂರಿನವರು. 917 ಷಟ್ಪದಿ ಪದ್ಯಗಳನ್ನು ಬರೆದು ಕವಿಚೂತವನ ಚೈತ್ರ ಬಿರುದನ್ನು ಪಡೆದು ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದರು. ಶ್ರೀ ಕೃಷ್ಣಪಾರಮ್ಯ ಎತ್ತಿ ತೋರಿಸಿದರೂ ಶಿವನನ್ನು ಕಡೆಗಣಿಸದ ಸಮನ್ವಯಕವಿ. ಲಕ್ಷ್ಮೀಶ ವೀಣೆ, ಶ್ರೀ ಲಕ್ಷ್ಮೀಕಾಂತನೇ ವೈಣಿಕನಾಗಿ ವೀಣೆಯನ್ನು ನುಡಿಸಿದ್ದಾನೆ. ಆತ ಬರೆಸಿದಂತೆ ನಾನು ಬರೆದಿದ್ದೇನೆ ಎಂದು ವಿನೀತನಾಗಿ ಹೇಳಿಕೊಂಡಿದ್ದಾನೆ ಎಂದರು.
ವಿದೇಶಿಯರು ಸಂಶೋಧನೆ: ಜೈಮಿನಿ ಭಾರತ ಮಾತ್ರವಲ್ಲ. ಇನ್ನೂ ಅತ್ಯಮೂಲ್ಯವಾದ ಕಾವ್ಯಗಳು, ಸಾಹಿತ್ಯಗಳು ಇಂದು ನಮ್ಮಲ್ಲಿಲ್ಲ. ಆದರೆ, ಜರ್ಮನಿಯಲ್ಲಿ ದೊರೆಯುತ್ತದೆ. ವಿದೇಶಿಯರು ಸಂಶೋಧನೆ ಮಾಡುತ್ತಿದ್ದಾರೆ. ವಾಷಿಂಗ್‌ಟನ್‌ನಲ್ಲಿ ಜೈಮಿನಿ ಭಾರತ ಗಾಯನ ಮಾಡಲ್ಪಡುತ್ತದೆ. ಸಾಹಿತ್ಯ, ಕಾವ್ಯ ಕಾಲಹರಣಕ್ಕಾಗಿ ಇರಬಾರದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಎನ್.ಎಸ್. ಶಿವಸ್ವಾಮಿ, ಕನ್ನಡ ನಾಡಿನಲ್ಲಿ ಕನ್ನಡದ ಮನ ಕನ್ನಡದ ಮನೆ ಇರಲಿ. ಭಾಷೆಯನ್ನು ಶ್ರೀಮಂತಗೊಳಿಸಲು ನಾವೆಲ್ಲ ಶ್ರಮಿಸೋಣ ಎಂದು ಕರೆ ನೀಡಿದರು.
ಚಿಕ್ಕಮಗಳೂರಿನ ಭಜನ ಮಂಡಳಿಯ ಪ್ರಧಾನ ಸಂಚಾಲಕ ಉದಯಸಿಂಹ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭಾ ಸದಸ್ಯೆ ಕವಿತಾ ಶೇಖರ್ ಉಪಸ್ಥಿತರಿದ್ದರು.
ಜಿಲ್ಲಾ ಜಾನಪದ ಕಲಾ ಪರಿಷತ್ ಅಧ್ಯಕ್ಷ ವೆಂಕಟೇಶ್ ಸ್ವಾಗತಿಸಿದರು. ಜಿಲ್ಲಾ ಗಮಕ ಕಲಾ ಪರಿಷತ್ ಅಧ್ಯಕ್ಷ ರಾಮಸುಬ್ರಾಯಶೇಟ್ ಕಾರ್ಯಕ್ರಮ ನಿರೂಪಿಸಿದರು.