ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕುಡಿಯುವ ನೀರಿಗೆ ಕೊಡಗಳ ಸರದಿ

Lingaraj Badiger
Updated On : 1 Apr 2013, 11:09 am

ಕ.ಪ್ರ.ವಾರ್ತೆ, ಹೊನ್ನಾಳಿ, ಮಾ.31:
ತಾಲೂಕಿನ ಹಲವಾರು ಗ್ರಾಮಗಳಲ್ಲಿ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಕಾಡಲಾರಂಭಿಸಿದ್ದು, ಗ್ರಾಮೀಣ ಭಾಗದಲ್ಲಿ ಜನರು ಬೆಳಗ್ಗೆಯಿಂದ ಸಂಜೆವರೆಗೆ ಕಿರುನೀರು ಯೋಜನೆಯ ಮಿನಿ ಟ್ಯಾಂಕ್ ಮತ್ತು ನಲ್ಲಿಗಳ ಬಳಿ ತಮ್ಮ ಖಾಲಿ ಕೊಡಗಳನ್ನು ಸರದಿಯಲ್ಲಿಟ್ಟುಕೊಂಡು ಕಾಯುವುದರಲ್ಲಿಯೇ ದಿನ ಕಳೆಯುವ ಪರಿಸ್ಥಿತಿ ಇದೆ.
 ತಾಲೂಕಿನ ತಿಮ್ಲಾಪುರ, ತರಗನಹಳ್ಳಿ, ಯಕ್ಕನಹಳ್ಳಿ, ನ್ಯಾಮತಿ ಭಾಗದ ಹಲವಾರು ಹಳ್ಳಿಗಳಲ್ಲಿ ಹೊಳೆ  ಹರಳಹಳ್ಳಿ ವ್ಯಾಪ್ತಿಯಲ್ಲಿನ ಹತ್ತಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೋಟಿ ಕೋಟಿ ನೀಡಿ ಸರ್ಕಾರದ ಅನುದಾನದಲ್ಲಿ ಕೊರೆಯಿಸಿದ ಬೋರ್‌ವೆಲ್‌ಗಳಲ್ಲಿ ಇಂದು ನೀರಿಲ್ಲ. ಒಂದು ವೇಳೆ ನೀರಿದ್ದರೂ ಅದು ಫ್ಲೋರೈಡ್‌ಯುಕ್ತವಾಗಿ ಕುಡಿಯಲು ಅಷ್ಟೊಂದು ಯೋಗ್ಯವಾಗಿರದೇ ಇರುವ ಸಮಸ್ಯೆ ಇಂದು ಜನರನ್ನು ಕಾಡುತ್ತಿದೆ.
ಆಟದ ಮೈದಾನ: ತಾಲೂಕಿನಲ್ಲಿ ಬಹಳಷ್ಟು ಗ್ರಾಮಗಳಲ್ಲಿರುವ ಕೆರೆಕಟ್ಟೆಗಳು ನೀರಿಲ್ಲದೆ ಒಣಗಿ ಮಕ್ಕಳ ಆಟದ ಮೈದಾನಗಿವೆ. ಹಲವಾರು ಗ್ರಾಮಗಳಲ್ಲಿ ವಿಧಿ ಇಲ್ಲದೆ ಸಮೀಪದಲ್ಲೇ ಸಿಗುವ ಆಶುದ್ಧ ನೀರನ್ನೇ ಕುಡಿದು ಸಾಕಷ್ಟು ಜನ ಅನಾರೋಗ್ಯಪೀಡಿತರಾಗಿ ನರಳುತ್ತಿರುವುದೂ ಕೂಡ ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗಿ ಕಾಣುವ ದೃಷ್ಯವಾಗಿದೆ.
ಸರ್ಕಾರ ಕೂಡ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಕಿರುನೀರು ಯೋಜನೆ, ಕೊಳವೆ ಬಾವಿ  ಕೊರೆಯಿಸುವುದು ಈಗಾಗಲೇ ಇರುವ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕಾಪಾಡಲು ಜನಸಂವರ್ಧನೆ ಯೋಜನೆ ಮೂಲಕ ಚೆಕ್ ಡ್ಯಾಂಗಳನ್ನು ನಿರ್ಮಿಸುವುದು ಹಾಗೂ ನದಿಗಳಿಂದ ಪೈಪ್‌ಲೈನ್ ಮೂಲಕ ಹಲವಾರು ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಹಲವು ಕೋಟಿ ಖರ್ಚು ಮಾಡುತ್ತಿದೆ.
ನೀರಿಗಾಗಿ ಪರದಾಟ: ತಾಲೂಕಿನಲ್ಲಿ 2010-11ರಲ್ಲಿ ಕುಡಿಯುವ ನೀರಿಗಾಗಿ ಕಿರುನೀರು ಸರಬರಾಜು ಯೋಜನೆ. ಮಲ್ಟಿ ವಿಲೇಜ್ ಸ್ಕೀಂ ಹೀಗೆ ಹಲವು ಯೋಜನೆ ಮೂಲಕ 38.66 ಕೋಟಿ ಖರ್ಚು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೂ, ತಾಲೂಕಿನಲ್ಲಿ ಕುಡಿಯುವ ನೀರಿನ ಅಭಾವ ತಪ್ಪಿಲ್ಲ. ತಾಲೂಕಿನ ಹಲವು ಗ್ರಾಮಗಳು ಇಂದಿಗೂ ನೀರಿಗಾಗಿ ಪರದಾಡುತ್ತಿವೆ.
ತಾಪಂ ಅಧಿಕಾರಿಗಳ ಮಾಹಿತಿ ಅನುಸಾರ ತಾಲೂಕಿನ ತರಗನಹಳ್ಳಿ, ಕೆಂಗಟ್ಟೆ, ಹನುಮಸಾಗರ ಗುಡ್ಡೇಹಳ್ಳಿ, ಮಾಸಡಿ, ನರಸಗೊಂಡನಹಳ್ಳಿ ಮುಂತಾದ ಕಡೆಗಳಲ್ಲಿ ಪ್ಲೋರೈಡ್‌ಯುಕ್ತ ನೀರು ಇದ್ದು, ಇಂತಹ ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡುವ ಬಗ್ಗೆ ಕಾಮಗಾರಿ ನಡೆಸಲಾಗುತ್ತಿದ್ದರೂ ಸತತ ಅನಾವೃಷ್ಟಿಯಿಂದ ನದಿಯಲ್ಲೇ ನೀರಿಲ್ಲದ ಪರಿಸ್ಥಿತಿ ಎದುರಾಗಿರುವಾಗ ಇನ್ನು ಪೈಪ್‌ಲೈನ್ ಮೂಲಕ ನೀರು ಸರಬರಾಜುವ ಮಾಡುವುದಾದರೂ ಹೇಗೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.
ಜಾನುವಾರುಗಳಿಗೂ ತೊಂದರೆ: ನೀರಿನ ಕೊರತೆಯಿಂದ ಗ್ರಾಮೀಣ ಪ್ರದೇಶಗಲ್ಲಿ ಜಾನುವಾರುಗಳೂ ತೊಂದರೆಗೊಳಗಾಗುತ್ತಿದ್ದು, ಬಹಳಷ್ಟು ರೈತರು ನೀರು, ಮೇವಿನ ಕೊರತೆಯಿಂದ ಜಾನುವಾರಗಳನ್ನು ಮಾರಾಟಮಾಡುತ್ತಿದ್ದು, ಹೈನುಗಾರಿಕೆಗೆ ಕೂಡಾ ದೊಡ್ಡ ಹಿನ್ನಡೆಯಾಗುತ್ತಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕಾರಣಿಗಳ ಬೆಟ್ಟದಷ್ಟು ಭರವಸೆಗಳು ಬಿಳಿ ಮೋಡಗಳ ರೀತಿಯಲ್ಲಿ ಬರುತ್ತಿವೆಯೇ ಹೊರತು ಇಳೆಗೆ ಮಳೆತರುವ ಜೀವನ ಭರವಸೆ ಮೂಡಿಸುವ ಮುಂಗಾರಿನ ಮೋಡಗಳು ಮಾತ್ರ ಮಾಯವಾಗಿ ಬದುಕಿನ ಭರವಸೆಯನ್ನೇ ಕಸಿಕೊಳ್ಳುತ್ತಿವೆ ಎನ್ನುವುದು ಮಾತ್ರ ನಿತ್ಯಸತ್ಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement