ಗುರುವಿನಿಂದ ಕಲಿತ ಪಾಠವೇ ನಿಜ ಪಾಠ
ಕ.ಪ್ರ.ವಾರ್ತೆ, ಶೃಂಗೇರಿ, ಮಾ.31: ಪುಸ್ತಕ ನೋಡಿ ಕಲಿಯುವುದಕ್ಕಿಂತ ಗುರುಮುಖದಿಂದ ಕಲಿತ ಪಾಠವೇ ನಿಜವಾದ ಪಾಠ ಎಂದು ಹಾಸನದ ವೇ.ಬ್ರಂ.ಶ್ರೀ ಎಂ.ವಿ. ಕೃಷ್ಣಭಟ್ ಹೇಳಿದರು.
ಅವರು ಪಟ್ಟಣದ ರಾಜಾನಗರ ಶಾರದಾ ಮಂಟಪದಲ್ಲಿ ಪ್ರಾರಂಭವಾಗಿರುವ ಕ್ಷೇತ್ರ ವಿಪ್ರ ಸಮ್ಮೇಳನದ ಧಾರ್ಮಿಕ ಗೋಷ್ಠಿಯಲ್ಲಿ ಷೋಡಷ ಸಂಸ್ಕಾರಗಳು ವಿಷಯದ ಕುರಿತು ಉಪನ್ಯಾಸ ನೀಡಿದರು.
ವೇದಗಳಲ್ಲಿ ಇಲ್ಲದ ವಿಷಯಗಳಿಲ್ಲ. ವೇದಗಳು ಜ್ಞಾನ ಭಂಡಾರಗಳಾಗಿವೆ. ಎಲ್ಲಾ ಸಂಸ್ಕಾರಗಳ ಮೂಲ ವೇದಗಳಾಗಿವೆ. ವೇದಗಳಿಲ್ಲದೇ ಯಾವುದೇ ಸಂಸ್ಕಾರ ಇರಲು ಸಾಧ್ಯವಿಲ್ಲ. ಇತ್ತಿಚಿನ ದಿನಗಳಲ್ಲಿ ಎಷ್ಟೋ ಜನರಿಗೆ ಸಂಸ್ಕಾರವೆಂಬುದೇ ಗೊತ್ತಿಲ್ಲದಿರುವುದು ಶೋಚನೀಯ ಎಂದರು.
ನಿತ್ಯಕರ್ಮ ವಿಧಿಗಳು ಕುರಿತು ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಪ್ರಾಧ್ಯಾಪಕ ಡಾ.ಎಂ.ಎಲ್.ನರಸಿಂಹಮೂರ್ತಿ ಉಪನ್ಯಾಸ ನೀಡಿದರು. ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಮಹಾಪಾಠ ಶಾಲಾ ಅಧ್ಯಕ್ಷ ವೇ.ಬ್ರ ಶ್ರೀ ಎಂ.ಎ. ನಾಗರಾಜ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಚ್.ಎಲ್. ತ್ಯಾಗರಾಜ್, ಎಂ.ಜಿ.ನಾಗಭೂಷಣ, ಶಶಿಶೇಖರ್ ಮೊದಲಾದವರು ಉಪಸ್ಥಿತರಿದ್ದರು. ನಂತರ ಶಿಕ್ಷಣ ಮಾರ್ಗದರ್ಶನ, ಬ್ರಾಹ್ಮಣ ಧರ್ಮ-ಯುವಜನಾಂಗ ಸಂವಾದ ಕಾರ್ಯಕ್ರಮ, ಸಂಜೆ ಬಹಿರಂಗ ಅಧಿವೇಶನ ನಡೆಯಿತು.
ಸಂಜೆ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಿತು. ಮಠದ ಆಡಳಿತಧಿಕಾರಿ ವಿ.ಆರ್. ಗೌರೀಶಂಕರ್ ಸಮಾರೋಪ ಭಾಷಣ ಮಾಡಿದರು. ಸುಗಮ ಸಂಗೀತ ಕಲಾವಿದೆ ಬಿ.ಕೆ. ಸುಮಿತ್ರ ಸೇರಿದಂತೆ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಕೆ.ಎಸ್. ಚಂದ್ರಶೇಖರ್ ರಾವ್ ಅಧ್ಯಕ್ಷತೆ ವಹಿಸಿದ್ದರು.