ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ
ತರೀಕೆರೆ: ನಿರ್ಧಿಷ್ಠ ತತ್ವ ಮತ್ತು ಸಿದ್ಧಾಂತ ರಹಿತ ರಾಜಕೀಯ ಪಕ್ಷಗಳಿಗೆ ಜನರು ಮಾನ್ಯತೆ ನೀಡುವುದಿಲ್ಲ ಎಂದು ಬಿಜಿಪಿ ಮುಖಂಡ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದ್ದಾರೆ.
ಭಾನುವಾರ ಬಿಜೆಪಿಯಿಂದ ಪಟ್ಟಣದ ಎಂ.ಜಿ. ಹಾಲ್‌ನಲ್ಲಿ ಏರ್ಪಡಿಸಿದ್ದ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಯಡಿಯೂರಪ್ಪ ಅವರದ್ದು ತಪ್ಪು ನಿರ್ಧಾರ, ಸೇನಾಧಿಪತಿ ಹೋಗಿದ್ದಾರೆ ಅಷ್ಟೆ, ಸೈನ್ಯ ನಮ್ಮ ಜೊತಗೆ ಇದೆ. ಪಕ್ಷ ಶಕ್ತಿ ಕಳೆದುಕೊಂಡಿಲ್ಲ. ಯಡಿಯೂರಪ್ಪ ಬರುವುದಕ್ಕೆ ಮಂಚೆಯೇ ಬಿಜೆಪಿ ಪಕ್ಷ ಇತ್ತು, ಯಡಿಯೂರಪ್ಪನವರು ಕಾಂಗ್ರೆಸ್ ಪಕ್ಷಕ್ಕೆ ಒಂದಕ್ಷರವು ಬೈದಿಲ್ಲ, ಬದಲಿಗೆ ಅಧಿಕಾರ ಕೊಟ್ಟ ಬಿಜಿಪಿ ಪಕ್ಷಕ್ಕೆ ಬೈಯುತ್ತಿದ್ದಾರೆ. ರಾಜ್ಯದಲ್ಲಿ ಬಂಗಾರಪ್ಪ ಪಕ್ಷ ಕಟ್ಟಿದರು ಏನಾಯಿತು, ಬಂಗಾರಪ್ಪನವರಿಗೆ ಆದ ಗತಿಯೇ ಯಡಿಯೂರಪ್ಪನವರಿಗೆ ಆಗುತ್ತದೆ. ಇತಿಹಾಸ ಮರುಕಳಿಸುತ್ತದೆ ಎಂದು ತಿಳಿಸಿದರು.
ಶ್ರೀಗಳ ನಿಲುವಿಗೆ ಸ್ವಾಗತ: ಜಗದೀಶ್ ಶೆಟ್ಟರ್ ರಾಜ್ಯದ ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿ ಪ್ರಕಟಿಸಿದೆ, ಕಾಂಗ್ರೆಸ್, ಜೆಡಿಎಸ್ ಮತ್ಯಾವುದೇ ಪಕ್ಷ ಪ್ರಕಟಿಸಿಲ್ಲ. ರಾಜಕಾರಣ ಕುಲಗೆಟ್ಟಿದೆ, ರಾಜಕೀಯ ದೊಂಬರಾಟ ಅಸಹ್ಯವಾಗಿದೆ. ಚುನಾವಣೆಯಲ್ಲಿ ಹಣ, ಹೆಂಡ ಹಂಚದೆ ಪ್ರಾಮಾಣಿಕವಾಗಿ ಚುನಾವಣೆ ನೆಡೆಸುತ್ತೇವೆ ಎಂದು ಅಭ್ಯರ್ಥಿಗಳಿಂದ ಒಪ್ಪಿಗೆ ಪತ್ರ ಪಡೆಯುತ್ತಿರುವ ಸಿರಿಗೆರೆ ಶ್ರೀಗಳ ನಿಲುವನ್ನು ಬಿಜಿಪಿ ಸ್ವಾಗತಿಸುತ್ತದೆ ಮತ್ತು ಶ್ರೀಗಳು ತಳೆದಿರುವ ನಿಲುವಿಗೆ ಪಕ್ಷ ಬದ್ದವಾಗಿದೆ ಎಂದು ಅವರು ತಿಳಿಸಿದರು.
ಸವಾಲು ಸ್ವೀಕರಿಸಿ: ವಿಶೇಷ ಸಂದರ್ಭದಲ್ಲಿ ಚುನಾವಣೆ ನೆಡೆಯುತ್ತಿದೆ. ಅಭ್ಯರ್ಥಿಯನ್ನು ಓರೆಹಚ್ಚಿ ನೋಡುವ ಪರೀಕ್ಷಾ ಸಮಯ ಬಂದಿದೆ. ಕಾರ್ಯಕರ್ತರು ಇದನ್ನು ಸವಾಲಾಗಿ ಸ್ವೀಕರಿಸಬೇಕು ಎಲ್ಲರೂ ಸೇರಿ ಸಮರ್ಥ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದರು.
ಬಿಜೆಪಿ ಮುಖಂಡ ವಿನಾಯಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರೂ ಸೇರಿ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸೋಣ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದು ತಿಳಿಸಿದರು. ಪಕ್ಷದ ತಾಲೂಕು ಕಾರ್ಯದರ್ಶಿ ರವಿಶಂಕರ್, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎನ್. ಮಂಜುನಾಥ್, ಮ್ಯಾಮ್‌ಕೋಸ್ ನಿರ್ದೇಶಕ ಆರ್. ದೇವಾನಂದ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ದುಗ್ಲಾಪುರ ಮಂಜುನಾಥ್, ಅವಿನಾಶ್, ಸದಾನಂದ್, ಕುಮಾರ್, ಮೋಹನ್ ಚಂದ್ರಶೇಖರ್, ಪಕ್ಷದ ಕಾರ್ಯಕರ್ತರು ಇದ್ದರು.