ಭಯೋತ್ಪಾದನೆ ಭಯದಲ್ಲಿ ಬದುಕು
ಕೊಪ್ಪ: ಪರಿಶುದ್ಧ ಪ್ರೀತಿಯ ಮೂಲಕ, ಜೋಗುಳದ ಹಾಡಿನ ಮೂಲಕ ಜೀವನೋತ್ಸಾಹವನ್ನು, ಜೀವನ ಮೌಲ್ಯಗಳನ್ನು ಕಲಿಸುವ ತಾಯಿಯ ಮಡಿಲಿಗಿಂತ ಮಿಗಿಲಾದ ಮಠ ಮಂದಿರಗಳಿಲ್ಲ ಎಂದು ಮೂಡುಬಿದ್ರೆ ಕೇಮಾರು ಸಾಂದೀಪಿನಿ ಮಠದ ಈಶ ವಿಠಲದಾಸ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಮೇಲಿನಪೇಟೆಯ ರಿಫಾಯಿ ದಫ್ ಕಮಿಟಿಯ 5ನೇ ವರ್ಷದ ದಫ್ ರಾತೀಬ್ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಆಶೀರ್ವಚನ ನೀಡಿ, ವಿಶ್ವ ಇಂದು ಭಯೋತ್ಪಾದನೆ ಭಯದಲ್ಲಿ ಬದುಕುತ್ತಿರುವುದು ಕಳವಳದ ಸಂಗತಿ. ಕಾಲ ಬದಲಾದಂತೆ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಧರ್ಮ ಬೇಡ,ಫಲಬೇಕು ಎಂದರೆ ಅದು ಸಾಧ್ಯವಿಲ್ಲ, ಜಾತಿ ವೈಮನಸ್ಸುಗಳನ್ನು ತೊರೆದು, ಸ್ವಸ್ಥ ಸಮಾಜ ಕಟ್ಟುವ ಗುರಿಯೊಂದಿಗೆ ಭಾಷಾಭಿಮಾನ, ದೇಶಾಭಿಮಾನ ಬೆಳೆಸಿಕೊಳ್ಳುವಂತೆ ಅವರು ಕರೆ ನೀಡಿದರು.
ಕೊಪ್ಪದ ಸಿಎಸ್ಐ ಧರ್ಮಗುರು ಪ್ರಮೀಣ್ ಮಾಬೆನ್ ಪ್ರವಚನ ನೀಡಿದರು. ಪ್ರೊ. ಅಹಮ್ಮದ್ ಷರಿಫ್ ಉಪನ್ಯಾಸ ನೀಡಿದರು. ರಿಫಾಯಿ ದಫ್ ಕಮಿಟಿ ಅಧ್ಯಕ್ಷ ರಿಯಾಜ್ ಅಧ್ಯಕ್ಷತೆ ವಹಿಸಿದ್ದರು. ಮಹಮ್ಮದ್ ಹನೀಫ್, ಡಾ. ಅಸೈಯದ್ ಹರೂನ್, ನೂರುಲ್ ಹುದಾ ಅರಬ್ಬಿ ಮದ್ರಸದ ಅಧ್ಯಕ್ಷ ಯೂಸುಫ್, ಅನ್ವರ್ ಷಾ ಖಾಸಿಂ ಶಾಫಿ, ಮಹಮದ್ ಅನೀಫ್, ಉಸ್ಮಾನ್, ಅಬ್ದುಲ್ ಖಾದರ್, ಇದ್ದರು.