ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮೂರ್ನಾಲ್ಕು ಕಡೆ ಒಂದೇ ಹೆಸರು...!

Lingaraj Badiger
Updated On : 1 Apr 2013, 11:19 am

- ಕಡೂರು ಕೃಷ್ಣಮೂರ್ತಿ
ಕ.ಪ್ರ.ವಾರ್ತ, ಕಡೂರು, ಮಾ.31:
ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನೂಕು ನುಗ್ಗಲು ನಡೆಯುತ್ತಿರುವ ಬಗ್ಗೆ ಮಾತ್ರ ಆಯೋಗವು ಗಮನಹರಿಸುತ್ತಿದೆಯೇ ಹೊರತು ಒಬ್ಬ ವ್ಯಕ್ತಿಯ ಹೆಸರು ಮೂರು ನಾಲ್ಕು ಕಡೆ ಮತಪಟ್ಟಿಯಲ್ಲಿ ಇದ್ದು, ಮತದಾನ ಮಾಡುತ್ತಿರುವ ಹೆಸರು ತೆಗೆಯುವ ಬಗ್ಗೆ ಚುನಾವಣಾ ಆಯೋಗವು ಗಮನಹರಿಸದೇ ಇರುವುದು ಸಾರ್ವಜನಿಕರ ಟೀಕೆಗೆ ಗ್ರಾಸವಾಗಿದೆ.            
   ಈ ವಿಷಯವನ್ನು ವಿವಿಧ ರಾಜಕೀಯ ಪಕ್ಷ ಸೇರಿದಂತೆ ಸಾರ್ವಜನಿಕರೂ ಚುನಾವಣಾ ಆಯೋಗದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಒಬ್ಬ ವ್ಯಕ್ತಿಯ ಹೆಸರು ಮೂರು ನಾಲ್ಕು ಕಡೆ ಮತದಾರರ ಪಟ್ಟಿಯಲ್ಲಿ ಸೇರಿದ್ದರೂ, ಮತಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಈ ರೀತಿ ಏಕ ವ್ಯಕ್ತಿಯ ಹೆಸರು ಹಲವೆಡೆ ಇರುವುದು ಚುನಾವಣೆಯ ಮತಪಟ್ಟಿ ಪರಿಷ್ಕರಣೆಯ ಸಂದರ್ಭದಲ್ಲಿ ಪರಿಷ್ಕರಣೆ ಮಾಡುವವರ ಕಣ್ಣಿಗೆ ಬಿದ್ದಿಲ್ಲವೇ ಎಂಬುದು ಆಶ್ಚರ್ಯ ತರಿಸುತ್ತಿದೆ.
ನಕಲಿ ದಾಖಲೆ: ಪಟ್ಟಣಕ್ಕೆ ಸಂಬಂಧಿಸದ ವ್ಯಕ್ತಿಯು ಯಾವುದೇ ಮನೆಯಾಗಲೀ ಇಲ್ಲದೆ ನಕಲಿ ದಾಖಲೆ ನೀಡುವ ಮೂಲಕ ಪಟ್ಟಣದಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವ ನೂರಾರು ಉದಾಹರಣೆಗಳಿವೆ. ಇದಕ್ಕೆ ಉದಾಹರಣೆ ಎಂದರೆ ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತದಾರ ಪಟ್ಟಿಯಲ್ಲಿ ಎರಡು ಮೂರು ಕಡೆ ಮತ್ತು ಪಟ್ಟಿಯಲ್ಲಿ ಹೆಸರುಗಳು ಇರುವುದು, ಪಟ್ಟಣಕ್ಕೆ ಸಂಬಂಧಿಸದ ಪಕ್ಕದ ಹಳ್ಳಿಗಾಡಿನ ವ್ಯಕ್ತಿಯ ಹೆಸರು ಪಟ್ಟಣದ ಸ್ಥಳೀಯ ಸಂಸ್ಥೆ ಚುನಾವಣೆ ಮತ ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದನ್ನು ಮತಪಟ್ಟಿ ಪರೀಶೀಲಿಸಿದರೆ ಕಾಣಬಹುದಾಗಿದೆ.  
 ಈ ರೀತಿ ಸೇರ್ಪಡೆಯಾಗಲು ಯಾರು ಕಾರಣ ಹೇಗೆ ಸೇರ್ಪಡೆ ಆಗಿದೆ ಎಂಬುದರ ಕುರಿತಾಗಿಯೂ ಕೂಡ ಚುನಾವಣಾ ಶಾಖೆ ಗಮನ ಹರಿಸದೇ ಇರುವುದು ಸಾರ್ವಜನಿಕರಿಗೆ ಆಶ್ಚರ್ಯ ತರಿಸುತ್ತಿದೆ. ಐದು ವರ್ಷದ ಹಿಂದೆ ಕಡೂರು ಪುರಸಭಾ ಚುನಾವಣೆಯಲ್ಲಿ ವಾರ್ಡಿಗೆ ಹಾಗು ಪಟ್ಟಣಕ್ಕೆ ಸಂಬಂಧಿಸದ ವ್ಯಕ್ತಿಗಳ ಹೆಸರನ್ನು ಕಡೂರಿನ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ ಬೇರೆ ಕಡೆಯಿರುವ ಮತದಾರರನ್ನು ತಮಗೆ ಬೇಕಾದ ವಾರ್ಡಿನ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂಬುದು ವಿವಿಧ ರಾಜಕೀಯ ಮುಖಂಡರ ಆರೋಪ.
ಹೊಸದಾಗಿ ಅರ್ಜಿ ಸ್ವೀಕಾರ: ಇದೀಗ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಬಗ್ಗೆ ಹೊಸದಾಗಿ ಅರ್ಜಿ  ಸ್ವೀಕರಿಸಲಾಗುತ್ತಿದೆಯೇ ಹೊರತು ನಕಲಿ ಮತದಾರರನ್ನು ಕಂಡು ಹಿಡಿದು ಹೆಸರು ಕೈ ಬಿಡುವುದಾಕ್ಕಾಗಲೀ ಅಥವಾ ಹಲವು ಕಡೆ ಒಬ್ಬನೇ ವ್ಯಕ್ತಿಯ ಹೆಸರು ಮತಪಟ್ಟಿಯಲ್ಲಿ ಇರುವುದರ ಬಗ್ಗೆ ಪರಿಶೀಲಿಸಿ ಅವುಗಳನ್ನು ರದ್ದುಪಡಿಸುವುದಕ್ಕಾಗಲೀ ಕ್ರಮ ಕೈಗೊಳ್ಳುತ್ತಿಲ್ಲ.
  ಬಹುಪಕ್ಷ ಪದ್ಧತಿ ಇರುವ ಭಾರತದ ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಆಮಿಷಕ್ಕೆ ಒಳಪಡದೆ ಗುಪ್ತ ಮತದಾನದಿಂದ ಸಮರ್ಥ ವ್ಯಕ್ತಿ ಆಯ್ಕೆ ಮಾಡಬೇಕೆಂಬುದು ಚುನಾವಣಾ ಆಯೋಗದ ನಿರ್ಧಾರವಾದರೆ ಇಂತಹ ಅಕ್ರಮಗಳನ್ನು ತಡೆಗಟ್ಟುವ ಬಗ್ಗೆ ಚುನಾವಣಾ ಆಯೋಗ ಗಮನಹರಿಸದೇ ಹೊದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥವಿಲ್ಲ ಎಂಬ ಸಾರ್ವಜನಿಕರ ಅಭಿಪ್ರಾಯಕ್ಕೆ ಆಯೋಗ ಕ್ರಮ ಕೈಗೊಳ್ಳಬೇಕಿದೆ.
 ಇಂತಹ ಅಕ್ರಮಗಳನ್ನು ತಡೆಗಟ್ಟಿ ಸುವ್ಯವಸ್ಥಿತ ಮತದಾನ ನಡೆಸಿದಲ್ಲಿ ಮಾತ್ರ ನಿಜವಾದ ಪ್ರಜಾತಂತ್ರದ ವ್ಯವಸ್ಥೆ ಅರ್ಥಪೂರ್ಣವಾಗಲು ಸಾದ್ಯವಾಗುತ್ತದೆ ಎನ್ನುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement