ವಿದ್ಯಾರ್ಥಿಗಳು ವ್ಯಕ್ತಿತ್ವ ರೂಪಿಸಿಕೊಳ್ಳಲು ಸಲಹೆ
ಕ.ಪ್ರ.ವಾರ್ತೆ, ತರೀಕೆರೆ, ಮಾ.31 ವಿದ್ಯಾರ್ಥಿಗಳು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಪಲ್ಲವಿ ತಿಳಿಸಿದರು.
ಅವರು ಪಟ್ಟಣದ ಎಸ್.ಜೆ.ಎಂ. ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದಿಂದ ಸರ್ಕಾರದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಧೈರ್ಯವಾಗಿ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಮತ್ತು ಪರೀಕ್ಷೆಯನ್ನು ಯಾವ ರೀತಿ ಎದುರಿಸಬೇಕು ಎಂಬ ಬಗ್ಗೆ ಅವರು ವಿವರ ನೀಡಿದರು.
ಸಮಾಜ ಕಲ್ಯಾಣ ಇಲಾಖಾಧಿಕಾರಿ ಎಚ್.ಪಿ. ಮಂಜುನಾಥ್ ಅವರು ಇಲಾಖೆಯಿಂದ ದೊರೆಯುವ ಎಲ್ಲಾ ಸೌಲಭ್ಯ ವಿವರಿಸಿ ಹಾಸ್ಟೆಲ್ ವ್ಯವಸ್ಥೆ, ಎಲ್.ಎಲ್.ಬಿ. ಮುಗಿಸಿದ ವಿದ್ಯಾರ್ಥಿಗಳಿಗೆ ರು. 2,000 ಭತ್ಯೆ ನೀಡಲಾಗುವುದು ಹಾಗೂ ವೃತ್ತಿ ಶಿಕ್ಷಣ ಮತ್ತು ಇನ್ನಿತರೆ ಶಿಕ್ಷಣದ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಉಮೇಶ್ ಅವರು ಪುರಸಭೆಯಿಂದ ದೊರೆಯುವ ಸೌಲಭ್ಯ ತಿಳಿಸಿದರು.
ಪ್ರಾಚಾರ್ಯ ಪ್ರೊ. ಕೆ.ವಿ. ಸಜ್ಜನ ಶೆಟ್ಟರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಉತ್ತಮ ಜೀವನ ರೂಪಿಸಿಕೊಳ್ಳುವುದು ನಮ್ಮ ಆಯ್ಕೆಯಾಗಿರಬೇಕು ಎಂದು ತಿಳಿಸಿದರು. ಪ.ಜಾ, ಪ.ಪಂ. ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಕೆ.ಆರ್. ವೀರೇಶ್ ಮಾತನಾಡಿದರು.