ಅಭಿವೃದ್ಧಿಗಾಗಿ ಕೆಜೆಪಿ ಬೆಂಬಲಿಸಿ: ಬಿಎಸ್‌ವೈ
ಕ.ಪ್ರ.ವಾರ್ತೆ, ಕಡೂರು, ಮೇ 1
ರಾಜ್ಯದಲ್ಲಿ ಕೆಜೆಪಿ ನೇತೃತ್ವದ ಸರ್ಕಾರ ರಚನೆಯಾದ ಇಪ್ಪತ್ನಾಲ್ಕು ಗಂಟೆಯೊಳಗೆ ರೈತರಿಗೆ 500 ರು. ಮಾಸಾಶನ, 1ಲಕ್ಷರು. ರೈತರ ಸಾಲ ಮನ್ನಾ, ತೆಂಗು ಮತ್ತು ಕೊಬ್ಬರಿಗೆ ನಿಖರ ಬೆಲೆ, ಬಡಮಕ್ಕಳಿಗೆ ಸರ್ಕಾರದಿಂದಲೇ ಉಚಿತ ಉನ್ನತ ಶಿಕ್ಷಣ ಕೊಡಿಸುವ ಯೋಜನೆಗಳನ್ನು ರೂಪಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಪರ ಪ್ರಚಾರದಲ್ಲಿ ಮಾತನಾಡಿ, ತಾವು ಮುಖ್ಯಮಂತ್ರಿಯಾದ ಅವಧಿಯಲ್ಲಿ ರಾಜ್ಯದ ರೈತರ, ಬಡಜನರ ಸಂಕಷ್ಟ ಅರಿಯುವ ಮೂಲಕ ದೇಶದಲ್ಲಿಯೇ ಮೊದಲಬಾರಿಗೆ ಎರಡು ಭಾರಿ ರೈತರ ಸಾಲಮನ್ನಾ ಮಾಡಲಾಯಿತು. ವೃದ್ದರಿಗೆ ಸಂಧ್ಯಾ ಸುರಕ್ಷಾ, ಓದುವ ಮಕ್ಕಳಿಗೆ ಸೈಕಲ್ ವಿತರಣೆ, ಹುಟ್ಟಿದ ಹೆಣ್ಣು ಮಗುವಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ, ರೈತರಿಗೆ ಶೂನ್ಯಬಡ್ಡಿ ದರದಲ್ಲಿ ಸಾಲ ವಿತರಣೆ ಸೇರಿದಂತೆ 224 ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದರು.
ಅಭಿವೃದ್ಧಿಗೆ ಆದ್ಯತೆ: ಕಸದ ಬುಟ್ಟಿಯಲ್ಲಿದ್ದ ಡಾ. ನಂಜುಂಡಪ್ಪ ವರದಿಯನ್ನು ತೆಗೆಸಿ ಅದರ ಶಿಫಾರಸ್ಸಿನಂತೆ ರಾಜ್ಯದ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಕೆಜೆಪಿ ಸರ್ಕಾರ ರಚನೆ ನಂತರ ಎಲ್ಲ ತಾಲೂಕುಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಯಾವುದೇ ಮಠಾಧೀಶರ, ರಾಜಕಾರಣಿಗಳ ಪರ ಆಶೀರ್ವಾದ ಮಾಡುವುದಿಲ್ಲ. ಕ್ಷೇತ್ರದ ಮತದಾರರು ಯಾವುದೇ ಆರೋಪಗಳಿಗೆ ಕಿವಿಗೊಡದೆ ಬಿ.ಎಸ್. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಲು ಕೆಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್‌ರನ್ನು ಗೆಲ್ಲಿಸಿ ಎಂದರು.
ಅಲ್ಪಸಂಖ್ಯಾತರಿಗೆ ಟಿಕೆಟ್: ಜಾತೀಯತೆ ಮಾಡದೆ ಕೆಜೆಪಿಯಿಂದ ರಾಜ್ಯದ 209 ಕ್ಷೇತ್ರಗಳಲ್ಲಿ ಕೆಜೆಪಿಯಿಂದ ವಿವಿಧ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, 9 ಕ್ಷೇತ್ರಗಳಲ್ಲಿ ಮಹಿಳೆಯರು,11 ಕಡೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗಿದೆ. ಈ ನೆಲ, ಜಲ, ಭಾಷೆ, ಪರಂಪರೆ, ಇತಿಹಾಸ, ಸಂಸ್ಕೃತಿಗಳ ಉಳಿವಿಗೆ ಪ್ರಾದೇಶಿಕ ಪಕ್ಷಗಳ ಅಗತ್ಯವಿದೆ ಎಂಬುದನ್ನು ಮನಗಂಡು ಕೆಜೆಪಿ ಪಕ್ಷಕ್ಕೆ ಮತನೀಡಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.
ಕಿಂಗ್ ಆಗುತ್ತೇವೆಯೇ ಹೊರತು ಕಿಂಗ್ ಮೇಕರ್ ಅಲ್ಲ
ಬೀರೂರು: ನಾವು ಕಿಂಗ್ ಆಗುತ್ತೇವೆಯೇ ಹೊರತು ಕಿಂಗ್ ಮೇಕರ್ ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಕಡೂರಿಗೆ ಚುನಾವಣಾ ಪ್ರಚಾರಕ್ಕೆ ತೆರಳಲು ಹೆಲಿಕ್ಯಾಪ್ಟರ್‌ನಲ್ಲಿ ಬೀರೂರಿನ ಕೆಎಲ್‌ಕೆ ಪದವಿಪೂರ್ವ ಕಾಲೇಜು ಮೈದಾನಕ್ಕೆ ಬುಧವಾರ ಸಂಜೆ ಬಂದಿಳಿದ ಯಡಿಯೂರಪ್ಪ ಅವರನ್ನು ಸುದ್ದಿಗಾರರು ಭೇಟಿ ಮಾಡಿದ ಸಂದರ್ಭದಲ್ಲಿ ಮುಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವಲ್ಲಿ ಕೆಜೆಪಿ ಕಿಂಗ್ ಆಗಿರುತ್ತದೆಯೋ, ಅಥವಾ ಕಿಂಗ್ ಮೇಕರ್ ಆಗಿರುತ್ತದೆಯೋ ಎಂಬ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯೆ ನೀಡಿದರು. ರಾಜ್ಯಾದ್ಯಂತ ಕೆಜೆಪಿಗೆ ಜನರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಬಾರಿ ಕೆಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲವು ಸಾಧಿಸಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಗ್ಗೆ ಸುದ್ದಿಗಾರರು ಪ್ರಶ್ನೆ ಕೇಳುತ್ತಿದ್ದಂತೆ ಯಡಿಯೂರಪ್ಪ ಅವರು ಉತ್ತರ ನೀಡದೆ ಕಡೂರಿಗೆ ತೆರಳಿದರು.