ಜನರಿಗೆ ತಪ್ಪು ಮಾಹಿತಿ: ಕಾಂಗ್ರೆಸ್ ದೂರು
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಮೇ 1
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಟಿ. ರವಿ ಚುನಾವಣಾ ಪ್ರಚಾರದಲ್ಲಿ ಕರಪತ್ರವನ್ನು ಮುದ್ರಿಸಿ ಪ್ರಚಾರ ಮಾಡುತ್ತಿದ್ದು, ಆ ಕರಪತ್ರದಲ್ಲಿ ಅನುಷ್ಠಾನವಾಗದಿರುವ ಕಾಮಗಾರಿಗಳನ್ನು ಕೇವಲ ಕಾಲ್ಪನಿಕ ಚಿತ್ರಗಳನ್ನು ಕಂಪ್ಯೂಟರ್ ಗ್ರಾಫಿಕ್ಸ್‌ನಿಂದ ಮುದ್ರಿಸಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದು, ಇದು ಸ್ಪಷ್ಟವಾದ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್‌ನ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಎ.ಎನ್. ಮಹೇಶ್ ಆರೋಪಿಸಿದ್ದಾರೆ.
ಈ ಸಂಬಂಧ ಅವರು ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ತಲೆಎತ್ತಿ ನಿಲ್ಲಲಿರುವ ಸರ್ಕಾರಿ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜಿನ ಸುಂದರ ನೋಟ ಎಂಬ ಅಡಿ ಬರಹದಲ್ಲಿ ಚಿತ್ರವನ್ನು ಸೃಷ್ಟಿಸಿದ್ದು, ಕೇವಲ ಕ್ಯಾಬಿನೆಟ್‌ನಲ್ಲಿ ಅನುಮೋದನೆಯಾದ ಮಾತ್ರಕ್ಕೆ ಎಂಜಿನಿಯರಿಂಗ್ ಕಾಲೇಜು ಮತ್ತು ಮೆಡಿಕಲ್ ಕಾಲೇಜು ಮಂಜೂರಾಗುವುದಿಲ್ಲ.
ಅಗತ್ಯ ಮೂಲಭೂತ ಸೌಕರ್ಯಗಳನ್ನು ನೋಡಿ ಎಂಜಿನಿಯರಿಂಗ್ ಕಾಲೇಜಿಗೆ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್‌ನಿಂದ ಹಾಗೂ ಮೆಡಿಕಲ್ ಕಾಲೇಜಿಗೆ ಇಂಡಿಯನ್ ಮೆಡಿಕಲ್ ಕೌನ್ಸಿಲ್ ಅನುಮತಿ ನೀಡಬೇಕಾಗಿದ್ದು, ಇದಿಷ್ಟು ಆದ ನಂತರ ಪೂರ್ಣ ಪ್ರಮಾಣದ ಅನುಮೋದನೆ ದೊರೆತಂತಾಗುತ್ತದೆ.
ಈಗ ಕೇವಲ ಕ್ಯಾಬಿನೆಟ್ ಮೇಲ್ಕಂಡ ಎರಡು ಸಂಸ್ಥೆಗಳಿಗೆ ಅನುಮೋದನೆಗಾಗಿ ಶಿಫಾರಸು ಮಾಡಿದೆಯಷ್ಟೆ ಎಂದು ಹೇಳಿದ್ದಾರೆ.
ಅದೇ ರೀತಿ ಚಿಕ್ಕಮಗಳೂರಿನ ಹಾಲಿನ ಡೈರಿಯ ಚಿತ್ರವು ಕೂಡ ಇದ್ದು, ಇದಕ್ಕೂ ಕೂಡ ಕಲ್ಪನೆಯ ಚಿತ್ರವಾಗಿದ್ದು ಹಾಗೂ ಚಿಕ್ಕಮಗಳೂರಿನ ರೈಲ್ವೆ ನಿಲ್ದಾಣಕ್ಕಾಗಿ ಕೇಂದ್ರ ಸರ್ಕಾರ ಶೇ.50 ಹಣ ನೀಡಿದ್ದು, ಕರಪತ್ರದಲ್ಲಿ ರಾಜ್ಯ ಸರ್ಕಾರದ ಅನುದಾನದಿಂದ ನಿರ್ಮಾಣಗೊಂಡ ರೈಲ್ವೆ ನಿಲ್ದಾಣ ಎಂಬುದಾಗಿದ್ದು, ಇದು ಮುಗ್ಧ ಮತದಾರರನ್ನು ವಂಚಿಸುವ ಪ್ರಯತ್ನವಾಗಿದ್ದು, ಈ ಸಂಬಂಧ ಕೂಡಲೇ ಅಭ್ಯರ್ಥಿ ಹಾಗೂ ಸಂಬಂಧಪಟ್ಟವರ ಮೇಲೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣವನ್ನು ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮತ್ತೊಂದು ದೂರು: ಬಿಜೆಪಿ ಅಭ್ಯರ್ಥಿ ಸಿ.ಟಿ. ರವಿಯವರು ವಾಹನದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಂಜೂರಾದ ಕಾಮಗಾರಿಗಳನ್ನು ಸಿ.ಡಿ. ಮುಖಾಂತರ ಟಿ.ವಿ.ಯಲ್ಲಿ ಮತದಾರರಿಗೆ ಪ್ರಚಾರ ಪಡಿಸುತ್ತಿದ್ದು, ಇದು ಚುನಾವಣೆಯ ನೀತಿ ಸಂಹಿತೆ ಆಗಿರುತ್ತದೆ. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನವು ಸಹ ಆಗಿರುವುದರಿಂದ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್‌ನ ಸಂಘಟನಾ ಕಾರ್ಯದರ್ಶಿ ಎಚ್.ಪಿ. ಮಂಜೇಗೌಡ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.
ನೀತಿ ಸಂಹಿತೆಯ ಪ್ರಕಾರ ಸರ್ಕಾರಿ ಕಾಮಗಾರಿಗಳಲ್ಲಿ ಜನಪ್ರತಿನಿಧಿಗಳ ಹೆಸರಿದ್ದಲ್ಲಿ ಅದನ್ನು ಜನರಿಗೆ ಕಾಣದಂತೆ ಮುಚ್ಚುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಮಗಾರಿಗಳನ್ನು ನಾನು ಮಾಡಿದ್ದೇನೆಂದು ಬಿಂಬಿಸುವ ಸಿ.ಟಿ. ರವಿಯವರ ಕಥಾನಕವಿರುವ ಸಿ.ಡಿ. ಯನ್ನು ಪ್ರಚುರಪಡಿಸಿದಲ್ಲಿ ಅದು ಕೂಡ ನೀತಿ ಸಂಹಿತೆಯ ಉಲ್ಲಂಘನೆಯಾಗಲಿದ್ದು, ಈ ಸಂಬಂಧ ಕ್ರಮವಹಿಸುವಂತೆ ಮನವಿ ಮಾಡಿದ್ದಾರೆ.