ಮೇಲ್ಮನೆ ಸದಸ್ಯೆಗೆ ಗೃಹ ಬಂಧನ
ಕ.ಪ್ರ. ವಾರ್ತೆ ಚಿಕ್ಕಮಗಳೂರು ಮೇ 1
ಚುನಾವಣಾ ಪ್ರಚಾರಕ್ಕೆ ಹೋಗಿದ್ದ ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡರನ್ನು ಗೃಹ ಬಂಧನದಲ್ಲಿಟ್ಟ ಬಿಜೆಪಿ ಕಾರ್ಯಕರ್ತರ ವರ್ತನೆಯನ್ನು ಖಂಡಿಸಿ ನಗರದಲ್ಲಿ ಬುಧವಾರ ರಾತ್ರಿ ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಲಕ್ಷ್ಮಣ್ ಸೇರಿದಂತೆ ಕೆಲವರಿಗೆ ಪೆಟ್ಟಾಯಿತು. ಲಾಠಿ ಪ್ರಹಾರ ನಡೆಸಿದ್ದನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು.
ಗಾಯತ್ರಿ ಶಾಂತೇಗೌಡರನ್ನು ಗೃಹ ಬಂಧನದಲ್ಲಿಟ್ಟ ಬಿಜೆಪಿ ನಗರಸಭಾ ಸದಸ್ಯ ಕಾಯಿ ರವಿ ಸೇರಿದಂತೆ ಮೂವರನ್ನು ಪೊಲೀಸರು ರಾತ್ರಿಯೇ ಪ್ರಕರಣ ದಾಖಲು ಮಾಡಿ ಬಂಧಿಸಿದರು.
ನಡೆದಿದ್ದೇನು: ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರು ನಗರದ ವಾರ್ಡ್ ನಂಬರ್ 30 ಮತ್ತು 31ರಲ್ಲಿ ಚುನಾವಣಾ ಪ್ರಚಾರಕ್ಕೆ ರಾತ್ರಿ ವೇಳೆಯಲ್ಲಿ ತೆರಳಿದ್ದರು. ಆಗ ಮನೆಯೊಂದರಲ್ಲಿ ಅವರಿಗೆ ಕಾಫಿ ಕೊಡುವಾಗ ಕಾಯಿ ರವಿ ಸೇರಿದಂತೆ ಇತರರು ಹೊರ ಭಾಗದಲ್ಲಿ ಮನೆಯ ಬಾಗಿಲು ಹಾಕಿ ಅವರು ಹಣ ಹಂಚುತ್ತಿದ್ದಾರೆಂದು ಪೊಲೀಸರಿಗೆ ತಿಳಿಸಿದ್ದಾರೆ.
ಆಗ, ಪೊಲೀಸರು ಸ್ಥಳಕ್ಕೆ ಬಂದು, ಬಾಗಿಲು ತೆಗೆಸಿ ನೋಡಿದಾಗ ಗಾಯುತ್ರಿ ಶಾಂತೇಗೌಡರ ಬಳಿ 8 ಸಾವಿರ ರುಪಾಯಿ ಇತ್ತು. ಅವರು ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಶಾಂತೇಗೌಡರ ಪತ್ನಿ. ಅವರು 50 ಸಾವಿರ ರುಪಾಯಿವರೆಗೆ ಸ್ವಂತ ಖರ್ಚಿಗಾಗಿ ಹಣ ಇಟ್ಟುಕೊಳ್ಳಲು ಅವಕಾಶ ಇದೆ. 8 ಸಾವಿರ ರುಪಾಯಿ ಮಾತ್ರ ಇರುವುದರಿಂದ ಅವರು ಹಣ ಹಂಚಲು ಬಂದಿಲ್ಲ ಎಂಬುದು ಖಾತ್ರಿಯಾಯಿತ್ತು. ಆಗ ಗಾಯಿತ್ರಿ ಶಾಂತೇಗೌಡ ಅವರು ಕಾರಿನಲ್ಲಿ ಮನೆಗೆ ತೆರಳುವಾಗ ಬಿಜೆಪಿ ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ಬೈದರೆಂದು ಹೇಳಲಾಗಿದೆ.
ಲಾಠಿ ಪ್ರಹಾರ: ಗಾಯತ್ರಿ ಶಾಂತೇಗೌಡ ಅವರು ಬಸವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲು ಬರುವ ವೇಳೆಗೆ ಬಿಜೆಪಿ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಠಾಣೆಯ ಎದುರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದರು. ಅವರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಆಗ ನಗರಸಭಾ ಸದಸ್ಯರಾದ ಲಕ್ಷ್ಮಣ್, ಹಿರೇಮಗಳೂರು ಪುಟ್ಟಸ್ವಾಮಿ, ಮಾಜಿ ನಗರಸಭಾ ಸದಸ್ಯ ಚಂದ್ರೇಗೌಡ ಸೇರಿದಂತೆ ಹಲವರಿಗೆ ಲಾಠಿ ಏಟುಗಳು ಬಿದ್ದಿವೆ.
ಅದೇ ವೇಳೆಗೆ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಎಲ್. ಬೋಜೇಗೌಡ ಅವರು ಸ್ಥಳಕ್ಕೆ ಬಂದಿದ್ದು, ಅವರೊಂದಿಗೆ ಜೆಡಿಎಸ್ ಕಾರ್ಯಕರ್ತರು ಸಹ ಬಂದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತು. ಬಿಗಿ ಬಂದೋಬಸ್ತ್‌ಗಾಗಿ ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಯಿತು. ಸಾರ್ವಜನಿಕರನ್ನು ಚದುರಿಸುವ ವೇಳೆಯಲ್ಲಿ ಕೆಲ ಪತ್ರಕರ್ತರಿಗೂ ಲಾಠಿ ಬಿಸಿ ತಾಕಿತು.
ಮೂವರ ಬಂಧನ: ಗಾಯತ್ರಿ ಶಾಂತೇಗೌಡ ಅವರು ನೀಡಿರುವ ದೂರಿನನ್ವಯ ಕಾಯಿ ರವಿ ಸೇರಿದಂತೆ ಮೂವರ ವಿರುದ್ಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಬಂಧಿಸಲಾಯಿತು. ಇದೇ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ, ಬಿಜೆಪಿ ಕಾರ್ಯಕರ್ತರು ಗೂಂಡಾ ವರ್ತನೆ ಪ್ರದರ್ಶನ ಮಾಡಿದ್ದಾರೆ. ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಪೊಲೀಸರು ಬಿಜೆಪಿ ಕಾರ್ಯಕರ್ತರಂತೆ ನಡೆದುಕೊಂಡು, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ವಿನಾಕಾರಣ ಲಾಠಿ ಚಾರ್ಜ್ ಮಾಡಿದ್ದಾರೆ. ಇದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಕ್ರಮಕ್ಕೆ ಆಗ್ರಹ: ಎಸ್.ಎಲ್. ಬೋಜೇಗೌಡ ಮಾತನಾಡಿ, ಚಿಕ್ಕಮಗಳೂರು ಕ್ಷೇತ್ರದಲ್ಲಿ ನಿರ್ಭಯವಾಗಿ ಚುನಾವಣೆ ನಡೆಯುವ ವಾತಾವರಣ ಇಲ್ಲದಂತಾಗಿದೆ. ಈ ವಿಷಯದಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗಾಯತ್ರಿ ಶಾಂತೇಗೌಡ ಮಾತನಾಡಿ, ಬಿಜೆಪಿಯವರು ಮಹಿಳೆಯರಿಗೆ ಗೌರವ ನೀಡುವ ಮಾತನಾಡುತ್ತಾರೆ. ಆದರೆ, ಆ ಪಕ್ಷದ ಕಾರ್ಯಕರ್ತರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಗೌರವದಿಂದ ನಡೆದುಕೊಂಡಿದ್ದಾರೆ. ಸೋಲಿನ ಹತಾಶೆಯಿಂದಾಗಿ ಬಿಜೆಪಿಯವರು ಈ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಹೇಳಿದರು.
ಧರಣಿ: ಬಳಿಕ ಜನರು ಚದುರುತ್ತಿದ್ದಂತೆ ಡಿವೈಎಸ್ಪಿಯವರು ಯಾರೋ ಕಲ್ಲು ತೂರಿದ್ದಾರೆಂದು ಗುಡುಗಿದರು. ಅವರು, ಬೇಕಾಂತಲೇ ಈ ರೀತಿಯಲ್ಲಿ ಹೇಳುತ್ತಿದ್ದಾರೆಂದು ಅರಿತು ಸ್ಥಳದಲ್ಲೇ ಇದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಠಾಣೆಯ ಎದುರು ಧರಣಿ ಕುಳಿತರು. ಸ್ಥಳದಲ್ಲೇ ಇದ್ದ ಜಿಲ್ಲಾ ರಕ್ಷಣಾಧಿಕಾರಿ ಎನ್. ಶಶಿಕುಮಾರ್ ಅವರು ಧರಣಿ ಕುಳಿತವರ ಮನವೊಲಿಸಿದ ಬಳಿಕ ಪ್ರತಿಭಟನೆ ಕೈಬಿಟ್ಟು ಕಾಂಗ್ರೆಸ್ ಕಾರ್ಯಕರ್ತರು ಮನೆಗಳಿಗೆ ತೆರಳಿದರು.