ಕಾನೂನು ಅರಿವು
ಶೃಂಗೇರಿ: ತಾಲೂಕು ಕಾನೂನು ಸೇವಾ ಸಮೀತಿ, ಶಿಶು ಅಭಿವೃದ್ಧಿ ಯೋಜನಾ ಇಲಾಖೆ, ವಕೀಲರ ಸಂಘಗಳ ಆಶ್ರಯದಲ್ಲಿ ಮಣಸೆ ಶಾಲಾವರಣದಲ್ಲಿ ಜನಸಾಮಾನ್ಯರಿಗಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನ್ಯಾಯಾಧೀಶ ಸಿ. ವೀರಭದ್ರಯ್ಯ, ಕಾನೂನಿನ ಸದ್ಬಳಕೆಯಾಗಬೇಕು ಹೊರತು ದುರ್ಬಳಕೆಯಾಗಬಾರದು. ಜನಸಾಮಾನ್ಯರಿಗೆ ಕಾನೂನು ಕಾಯ್ದೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು. ಮಾನವ ಹುಟ್ಟಿನಂದಿನಿಂದ ಪ್ರತಿಯೊವುದು ಕೆಲಸಗಳಲ್ಲೂ ಕಾನೂನು ಅತೀ ಅವಶ್ಯಕವಾಗಿದೆ ಈ ನಿಟ್ಟಿನಲ್ಲಿ ಕಾನೂನು ಅರಿವು ಅಗತ್ಯ ಎಂದರು. ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಟಿ.ಎಲ್. ಉಮೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಧಾರಾಕಾರ ಮಳೆ: ಸಿಡಿಲಿಗೆ ಇಬ್ಬರು ಬಲಿ
ಚಿಕ್ಕಮಗಳೂರು: ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ಗುಡುಗು, ಸಿಡಿಲು ಸಹಿತ ಬಿದ್ದ ಧಾರಾಕಾರ ಮಳೆಯಿಂದಾಗಿ ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ.
ಒಬ್ಬರು ಚಿಕ್ಕಮಗಳೂರು ನಗರದಲ್ಲಿ ಮೃತಪಟ್ಟಿದ್ದರೆ, ಇನ್ನೋರ್ವರು ಆಲ್ದೂರಿನಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ಆರಂಭವಾದ ಮಳೆಯ ನಡುವೆ ಗುಡುಗು ಮತ್ತು ಸಿಡಿಲು ಬಂದಿದ್ದು, ಸಿಡಿಲಿನ ಹೊಡೆತಕ್ಕೆ ದಂಟರಮಕ್ಕಿಯ ದಾಸಪ್ಪ(45) ಎಂಬುವವರು ಮೃತಪಟ್ಟರೆ ಆಲ್ದೂರಿನಲ್ಲಿ ಸುಹಾನ್ (18) ಎಂಬ ಯುವಕ ಸಾವಪ್ಪಿದ್ದಾನೆ.
ದಂಟರಮಕ್ಕಿ ಬಡಾವಣೆಯ ದಾಸಪ್ಪ ತನ್ನ ಮನೆಯ ಮುಂದೆ ಕೆಲಸ ಮಾಡುತ್ತಿದ್ದಾಗ ಬಂದ ಸಿಡಿಲಿನ ಹೊಡೆತಕ್ಕೆ ಮೃತಪಟ್ಟಿದ್ದು, ಕೂಡಲೇ ಆತನ ಸಂಬಂಧಿಕರು ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಆಲ್ದೂರಿನ ಕಾಲೇಜು ಆವರಣದಲ್ಲಿ ಸುಹಾಸ್ ಮತ್ತು ಆತನ ಸ್ನೇಹಿತ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಬಂದ ಸಿಡಿಲಿನ ಹೊಡೆತಕ್ಕೆ ಸುಹಾನ್ ತೀವ್ರತರವಾಗಿ ಗಾಯಗೊಂಡಿದ್ದು, ಕೂಡಲೇ ಸಮೀಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಚಿಕ್ಕಮಗಳೂರಿನ ಆಸ್ಪತ್ರೆಗೆ ಕರೆದ್ಯೊಯ್ಯಲಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಪ್ಪಿದ್ದಾನೆ.
ಚಿಕ್ಕಮಗಳೂರು ನಗರದ ಕಲ್ಲುದೊಡ್ಡಿ ಸೇರಿದಂತೆ ಕೆಲವು ಬಡಾವಣೆಗಳ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಕಲ್ಲುದೊಡ್ಡಿಯಲ್ಲಿ ಮನೆಯೊಂದರ ಸೀಟು ಹಾರಿಹೊದ ಪರಿಣಾಮ ಮೂರು ಮಂದಿಗೆ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.