ಕೊನೆಯ ದಿನ ವಿವಿಧ ಪಕ್ಷಗಳ ಅಬ್ಬರದ ಪ್ರಚಾರ
ಕಪ್ರವಾರ್ತೆ,ಚಿಕ್ಕಮಗಳೂರು,ಮೇ 3
ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಶುಕ್ರವಾರ ನಗರದಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದವು.
ಒಂದೆಡೆ ಬಿಜೆಪಿ ಅಭ್ಯರ್ಥಿ ಸಿ.ಟಿ. ರವಿ ಅವರಿಂದ ರೋಡ್ ಶೋ. ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಶಾಂತೇಗೌಡ ಅವರು ಮನೆ ಮನೆಗಳಿಗೆ ತೆರಳಿ ಮತಯಾಚನೆ ಮಾಡಿದರು.
ಶುಕ್ರವಾರದಂದು ಕಾಂಗ್ರೆಸ್ ಮತದಾನ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆದರೆ, ಕೊನೆ ಕ್ಷಣದಲ್ಲಿ ಕಾರಣಾಂತರದಿಂದ ಕೈಬಿಡಲಾಯಿತು. ಪೂರ್ವ ನಿಗದಿಯಂತೆ ಬಿಜೆಪಿ ಅಭ್ಯರ್ಥಿ ಸಿ.ಟಿ. ರವಿ ಅವರು ರೋಡ್ ಶೋ ನಡೆಸಿದರು.
ಇಲ್ಲಿನ ಶ್ರೀ ಬೋಳರಾಮೇಶ್ವರ ದೇವಾಲಯದಿಂದ ಹೊರಟ ಬಿಜೆಪಿಯ ರೋಡ್ ಶೋ ಐ.ಜಿ. ರಸ್ತೆಯ ಮೂಲಕ ಹನುಮಂತಪ್ಪ ವೃತ್ತಕ್ಕೆ ಬರುತ್ತಿದ್ದಂತೆ ಗುಡುಗು ಸಹಿತ, ಧಾರಾಕಾರವಾಗಿ ಮಳೆ ಸುರಿಯಿತು. ಮೆರವಣಿಗೆ ಅರ್ಧ ದಾರಿಯವರೆಗೆ ಸಾಗಿದರೂ ಜನರು ಅದರೊಂದಿಗೆ ಸೇರಿಕೊಳ್ಳಲು ತಂಡೋಪತಂಡವಾಗಿ ಬರುತ್ತಲೇ ಇರುವುದನ್ನು ಕಂಡು ಬಂದಿತು. ಕೆಲವು ಮಹಿಳೆಯರು ಚಿಕ್ಕ ಚಿಕ್ಕ ಮಕ್ಕಳು ಕರೆದುಕೊಂಡು ಮರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಳೆಯನ್ನು ಲೆಕ್ಕಿಸದೆ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು, ಎಂ.ಜಿ. ರಸ್ತೆಯಿಂದ ಆಜಾದ್ ಪಾರ್ಕ್ವರೆಗೆ ಮಳೆಯಲ್ಲಿಯೇ ಮೆರವಣಿಗೆ ಸಾಗಿತು. ಲಂಬಾಣಿ ಜನಾಂಗದ ಮಹಿಳೆಯರು ಹಾಡಿಗೆ ಹೆಜ್ಜೆ ಹಾಕಿದರು.
ಕೆಲವರಂತೂ ಧಾರಾಕಾರವಾಗಿ ಸುರಿಯುವ ಮಳೆಯನ್ನು ಲೆಕ್ಕಿಸದೆ ಡ್ಯಾನ್ಸ್ ಮಾಡುತ್ತಾ ಮುಂದೆ ಹೋಗುತ್ತಿದ್ದರು. ಇನ್ನು ಕೆಲವರಿಗೆ ಮಳೆಯ ಪರಿವೆ ಇಲ್ಲದಂತೆ ಸಾಗುತ್ತಿದ್ದರು. ಒಟ್ಟಾರೆ ನಗರದಲ್ಲಿ ದೊಡ್ಡ ಉತ್ಸವದಲ್ಲಿ ಜನರು ಸೇರಿದಂತೆ ಕಂಡು ಬರುತ್ತಿತ್ತು.
ರೋಡ್ ಶೋನಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಕೆ. ಪ್ರಾಣೇಶ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಬೋಜೇಗೌಡ ಇದ್ದರು.
ಕಡೂರಿನಲ್ಲಿ ಅಂತಿಮ ಘಟ್ಟ ತಲುಪಿದ ರಾಜಕೀಯ ಕಸರತ್ತು
ಕ.ಪ್ರ.ವಾರ್ತೆ, ಕಡೂರು, ಮೇ.3 ಬಡತನ ಮತ್ತು ಬರಗಾಲ ಹೊದ್ದು ಮಲಗಿರುವಾಗಲೇ ಬಂದಿರುವ ವಿಧಾನಸಭಾ ಚುನಾವಣೆಗೆ ಎಪ್ಪತ್ತರೆಡು ಗಂಟೆ ಬಾಕಿ ಇದ್ದು, ಕಸರತ್ತು ಅಂತಿಮಘಟ್ಟ ಮುಟ್ಟುವ ಮೂಲಕ ಕಣದಲ್ಲಿರುವ ವಿವಿಧ ಪಕ್ಷಗಳ ಅಭ್ಯರ್ಥಿಗಳು ಎಲ್ಲಾ ಹಂತದ ಪ್ರಚಾರ ಮುಗಿಸಿದ್ದರೆ, ಇತ್ತ ಮತದಾರ ಮಾತ್ರ ಯಾರಿಗೆ ಮತ ನೀಡಬೇಕು ಎಂಬುದನ್ನು ತೀರ್ಮಾನಿಸಿ ಗುಟ್ಟು ಬಿಟ್ಟುಕೊಡದೆ ಸುಮ್ಮನಿದ್ದಾನೆ.
ಹಿಂದಿನಂತೆ ತಿಂಗಳುಗಟ್ಟಲೆ ಬಹಿರಂಗ ಪ್ರಚಾರಕ್ಕೆ ಆಯೋಗ ಅವಕಾಶ ನೀಡದೆ 13 ದಿನ ಮಾತ್ರ ಸಮಯ ನೀಡಿ, ಅಭ್ಯರ್ಥಿಗಳ ಜೇಬಿಗೆ ರಕ್ಷಣೆ ಒದಗಿಸಿರುವುದು ಒಂದಾದರೆ ರಾಜಕೀಯ ಪಕ್ಷಗಳ ನಾಯಕರು ತಮ್ಮ ರಾಜ್ಯಮಟ್ಟದ ನಾಯಕರ ಮುಂದೆ ಜನರ ಬಲಾಬಲ ಪ್ರದರ್ಶಿಸಿ ಚುನಾವಣೆಯ ತಾಲೀಮು ನಡೆಸಿದರು.
ಜೆಡಿಎಸ್, ಕಾಂಗ್ರೆಸ್, ಬಿಜೆಪಿ, ಕೆಜೆಪಿ, ಬಿ.ಎಸ್.ಆರ್. ಪಕ್ಷಗಳು ಪ್ರಚಾರದಲ್ಲಿ ತೊಡಗಿ ಐವರೂ ಅಭ್ಯರ್ಥಿಗಳು ತಮ್ಮ ಸಾಮರ್ಥ್ಯದ ಮೇಲೆ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. 1.82 ಲಕ್ಷ ಮತದಾರರು: ಕಡೂರು ವಿಧಾನಸಭಾ ಕ್ಷೇತ್ರದಲ್ಲಿ 1.82 ಲಕ್ಷ ಮತದಾರರಿದ್ದು, 5 ಜಿಪಂ ಕ್ಷೇತ್ರ ವ್ಯಾಪ್ತಿ ಹೊಂದಿರುವ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಕೆ.ಬಿ. ಮಲ್ಲಿಕಾರ್ಜುನ್, ಜೆಡಿಎಸ್ನಿಂದ ವೈ.ಎಸ್.ವಿ. ದತ್ತ, ಬಿಜೆಪಿಯಿಂದ ಬೀರೂರು ದೇವರಾಜು, ಕೆಜೆಪಿಯಿಂದ ಬೆಳ್ಳಿ ಪ್ರಕಾಶ್,ಬಿ.ಎಸ್.ಆರ್. ಕಾಂಗ್ರೆಸ್ನಿಂದ ಕೆಂ.ಎಂ. ಕೆಂಪರಾಜು ಮತ್ತು ಲೋಕಸತ್ತಾ ಪಕ್ಷದಿಂದ ಬಿ.ಎಂ. ಮಧು ಮತ್ತು ಪಕ್ಷೇತರರಾದ ಟಿ.ಬಿ. ಕುಮಾರನಾಯ್ಕ, ಕೆ.ಆರ್. ಗಂಗಾಧರಪ್ಪ, ಕೆ.ಎಚ್. ನಾಗರಾಜು ಸೇರಿದಂತೆ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ತಮ್ಮದೇ ಮತದಾರರು: ಕ್ಷೇತ್ರದಲ್ಲಿ ಕುರುಬರು ಮತ್ತು ವೀರಶೈವರು ಬಹುಸಂಖ್ಯಾತರಾಗಿದ್ದು, ನಂತರ ಉಪ್ಪಾರ ಸಮುದಾಯ ಮತ್ತು ತೆಲುಗು ಗೌಡ ಸಮುದಾಯವಿದ್ದು ಆನಂತರ ಸ್ಥಾನದಲ್ಲಿ ಗಂಗಾಮತಸ್ಥರು, ದೇವಾಂಗ, ಮಡಿವಾಳರು, ಅಲ್ಪಸಂಖ್ಯಾತರು, ವಾಲ್ಮೀಕಿ, ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ವರ್ಗದ ಮತದಾರರು ಇದ್ದಾರೆ.