ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ: ಡಿಸಿ ಯಶವಂತ್
ಕಪ್ರವಾರ್ತೆ,ಚಿಕ್ಕಮಗಳೂರು,ಮೇ 3
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಭಾನುವಾರ ನಡೆಯಲಿರುವ ಚುನಾವಣೆಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಜಿಲ್ಲೆಯಲ್ಲಿ ಕೈಗೊಂಡಿರುವ ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿ ವಿ. ಯಶವಂತ್ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಎನ್. ಶಶಿಕುಮಾರ್ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೇ 5ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಜಿಲ್ಲೆಯ 1165 ಮತದಾನ ಕೇಂದ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಇದಕ್ಕಾಗಿ 5643 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ. ಯಶವಂತ್ ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 8,36,325 ಮತದಾರರು ಇದ್ದು, ಈ ಪೈಕಿ 423894 ಪುರುಷರು, 412431 ಮಹಿಳೆಯರು ಇದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ 149984, ಮೂಡಿಗೆರೆ- 152650, ಚಿಕ್ಕಮಗಳೂರು- 191074, ತರೀಕೆರೆ- 159863, ಕಡೂರು- 182754 ಮತದಾರರು ಇದ್ದಾರೆ. 1165 ಮತಗಟ್ಟೆಗಳ ಪೈಕಿ 226 ಸೂಕ್ಷ್ಮ, 149 ಅತಿ ಸೂಕ್ಷ್ಮ, 790 ಸಾಮಾನ್ಯ ಮತದಾನ ಕೇಂದ್ರಗಳಿವೆ. ಜಿಲ್ಲೆಯಲ್ಲಿ ಮತದಾರರಿಗೆ ಗುರುತಿನ ಚೀಟಿ ನೀಡುವ ಕೆಲಸದಲ್ಲಿ ಚಿಕ್ಕಮಗಳೂರು ಜಿಲ್ಲೆ ಶೇ. 99.50 ರಷ್ಟು ಪ್ರಗತಿ ಸಾಧಿಸಿದೆ. ಈ ಬಾರಿ ಮತದಾರರಿಗೆ ಸರ್ಕಾರಿ ನೌಕರರಿಂದಲೇ ಐಡಿ ಸ್ಲಿಪ್ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.
448 ಸೂಕ್ಷ್ಮ ವೀಕ್ಷಕರು: ಮತದಾನದ ಕರ್ತವ್ಯಕ್ಕೆ 5643 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದ್ದು, ಈ ಪೈಕಿ ಶೃಂಗೇರಿ ಕ್ಷೇತ್ರಕ್ಕೆ 1204, ಮೂಡಿಗೆರೆ- 1081, ಚಿಕ್ಕಮಗಳೂರು- 1158, ತರೀಕೆರೆ- 1057, ಕಡೂರು- 1143 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಅದರ ಜತೆಗೆ ಜಿಲ್ಲೆಯಾದ್ಯಂತ 448 ಸೂಕ್ಷ್ಮ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಅದೇ ರೀತಿ ಶೃಂಗೇರಿಗೆ 38, ಮೂಡಿಗೆರೆಗೆ 40, ಚಿಕ್ಕಮಗಳೂರಿಗೆ 40, ತರೀಕೆರೆ ಹಾಗೂ ಕಡೂರು ಕ್ಷೇತ್ರಕ್ಕೆ ತಲಾ 30 ಮಂದಿ ವೀಡಿಯೋಗ್ರಾಫರ್ಸ್ ನೇಮಕ ಮಾಡಲಾಗಿದೆ.
ಮತದಾನಕ್ಕೆ ನಿಯೋಜಿತ ಸಿಬ್ಬಂದಿಗಳ ಬಳಕೆಗಾಗಿ 184 ಬಸ್ಗಳು, 6 ಮಿನಿ ಬಸ್, 4 ಮ್ಯಾಕ್ಸಿಕ್ಯಾಬ್, 280 ಜೀಪುಗಳನ್ನು ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಎಂಸಿಸಿ ತಂಡಗಳಿಗೆ ಈ ವರೆಗೆ 30 ದೂರುಗಳು ಬಂದಿದ್ದು, ಇವುಗಳಲ್ಲಿ 26 ದೂರುಗಳು ದಾಖಲಿಸಿ ಎಫ್ಐಆರ್ ದಾಖಲಿಸಲಾಗಿದೆ.
ನಕ್ಸಲ್ ಪೀಡಿತ ಪ್ರದೇಶ: ಜಿಲ್ಲೆಯಲ್ಲಿರುವ 1165 ಮತಗಟ್ಟೆಗಳಲ್ಲಿ 149 ಮತಗಟ್ಟೆಗಳು ಅತಿ ಸೂಕ್ಷ್ಮ, ಅವುಗಳಲ್ಲಿ 36 ಮತದಾನ ಕೇಂದ್ರಗಳು ನಕ್ಸಲ್ ಪೀಡಿತ ಪ್ರದೇಶದಲ್ಲಿವೆ. ಇವುಗಳಲ್ಲಿ ಶೃಂಗೇರಿ ಕ್ಷೇತ್ರದಲ್ಲಿ 30, ಮೂಡಿಗೆರೆ ಕ್ಷೇತ್ರದಲ್ಲಿ 6 ಮತದಾನ ಕೇಂದ್ರಗಳಿವೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಎನ್. ಶಶಿಕುಮಾರ್ ಹೇಳಿದರು.
ಚುನಾವಣಾ ಸಮಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು 3700 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಈ ಪೈಕಿ 150 ಅಧಿಕಾರಿಗಳು, 1200 ಪೊಲೀಸ್ ಸಿಬ್ಬಂದಿ, 350 ಡಿಎಆರ್, ಗೃಹರಕ್ಷಕದಳ, ಅರಣ್ಯ ಇಲಾಖೆಯ 500 ಮಂದಿ ಸೇರಿದಂತೆ ಕೆಎಸ್ಆರ್ಟಿಸಿ, ಸಿಪಿಎಂಎಫ್ ಸಿಬ್ಪಂದಿಗಳು ಇದ್ದಾರೆ. ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಬಂದ ನಂತರದಲ್ಲಿ ಈವರೆಗೆ ಮದ್ಯಪಾನ ನಿಷೇಧ ಕಾಯ್ದೆಯಡಿ 30 ಪ್ರಕರಣಗಳನ್ನು ದಾಖಲಿಸಿಕೊಂಡು ರು. 9.57 ಲಕ್ಷ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯ ವಿವಿಧ ಠಾಣೆಗಳಲ್ಲಿ ವ್ಯಕ್ತಿಗಳಿಗೆ ಸಂಬಂಧಿಸಿದಂತೆ 1165 ಜನರ ವಿರುದ್ಧ 767 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.
2 ಪ್ರಕರಣಗಳಲ್ಲಿ 3,14,500 ನಗದು ವಶಪಡಿಸಿಕೊಳ್ಳಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 34 ಪ್ರಕರಣಗಳು ದಾಖಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್ ಉಪಸ್ಥಿತರಿದ್ದರು.