ಮತದಾರರ ಜಾಗೃತಿ ಅಭಿಯಾನ
ತರೀಕೆರೆ: ವಿಕಸನ ಸಂಸ್ಥೆ ತರೀಕೆರೆ ದಿ ಹಂಗರ್ ಪ್ರಾಜೆಕ್ಟ್ ಬೆಂಗಳೂರು ವತಿಯಿಂದ ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ ಎಂಬ ಶೀರ್ಷಿಕೆಯೊಂದಿಗೆ ಮತದಾರರ ಜಾಗೃತಿ ಆಂದೋಲನ ಏರ್ಪಡಿಸಲಾಗಿತ್ತು.
ಮತದಾರರ ಮನೆಮನೆಗೆ ಹೋಗಿ ಮತದಾರರಲ್ಲಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕುರಿತು, ಚುನಾವಣೆ ದಿನದಂದು 100ಕ್ಕೆ 100 ಭಾಗ ನಿರ್ಭೀತಿಯಿಂದ ಮತದಾನ ಮಾಡುವಂತೆ ಜನರಿಗೆ ಅರಿವು ಮೂಡಿಸಲಾಯಿತು.
ಯಾವುದೇ ಆಸೆ ಅಮಿಶಗಳಿಗೆ ಕೈ ಒಡ್ಡಬಾರದು ಮತ್ತು ಹೆಂಡ ಸಾರಾಯಿಗಳಿಗೆ ತಮ್ಮ
ಮತವನ್ನು ಮಾರಾಟ ಮಾಡಬಾರದು ಎಂದು ಜಾಗೃತಿ ಮೂಡಿಸಲಾಯಿತು. ತರೀಕೆರೆ ತಾಲೂಕಿನ ನಂದಿ ಹೊಸಹಳ್ಳಿ ಗ್ರಾಮದಿಂದ ಆರಂಭವಾದ ಕಾರ್ಯಕ್ರಮ ತಾಲೂಕಿನ 32 ಹಳ್ಳಿಗಳಲ್ಲಿ ಜಾಥಾ, ಕರಪತ್ರಗಳನ್ನು ಹಂಚುವುದು, ಸಭೆಗಳನ್ನು ಮಾಡುವುದರ ಮೂಲಕ ನೆರವೇರಿಸಲಾಯಿತು. ಒಟ್ಟು 56 ಹಳ್ಳಿಗಳಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲಾಯಿತು. ವಿಕಸನ ಸಂಸ್ಥೆ ಅಧ್ಯಕ್ಷ ಎ.ಎಂ. ವರ್ಗೀಸ್ ಕ್ಲೀಟಸ್, ಕಾರ್ಯಕರ್ತರಾದ ಕೆ. ಶ್ರೀನಿವಾಸ್, ಎಂ.ಎಚ್. ಲಕ್ಷ್ಮಣ್, ಕದಂಬ ಯುವಕ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ, ಸ್ವಸಹಾಯ ಸಂಘ, ಸ್ತ್ರೀ ಶಕ್ತಿ ಸಂಘ, ಮಹಿಳಾ ಒಕ್ಕೂಟಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.