ಕಟ್ಟುನಿಟ್ಟಿನ ನೀತಿ ಸಂಹಿತೆಗೆ ಖುಷ್
ನರಸಿಂಹರಾಜಪುರ: ಚುನಾವಣಾ ಆಯೋಗವು ಕಟ್ಟುನಿಟ್ಟಾಗಿ ನೀತಿ ಸಂಹಿತೆ ಜಾರಿಗೆ ತಂದಿರುವುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಪಟ್ಟಣ ಪ್ರದೇಶಗಳಲ್ಲಿ ನಿರಂತರವಾಗಿ ಕಿರುಚುತ್ತಿದ್ದ ಧ್ವನಿ ವರ್ದಕಗಳು ಈ ಬಾರಿ ಅಷ್ಟಾಗಿ ಕೇಳಲಿಲ್ಲ. ವಿಶೇಷವಾಗಿ ಸಾರ್ವಜನಿಕರಿಗೆ ಊಟ ಹಾಕುವುದಕ್ಕೆ ಅನುಮತಿ ಪಡೆಯಲೇಬೇಕು ಎಂಬ ಚುನಾವಣಾ ಆಯೋಗದ ಸೂಚನೆಯಿಂದ ಕೆಲವು ಸಂದರ್ಭದಲ್ಲಿ ಕಿರಿ, ಕಿರಿ ಆದರೂ ಒಟ್ಟಾರೆ ಉತ್ತಮ ಪರಿಣಾಮ ಬೀರಿದೆ ಎಂಬುದು ಸಾರ್ವಜನಿಕರಿಂದ ಕೇಳಿ ಬರುವ ಮಾತಾಗಿದೆ.
ಇದೇ ಪ್ರಥಮ ಬಾರಿಗೆ ಬಿಎಸ್‌ಎಫ್ ಯೋಧರು ಚುನಾವಣಾ ಭದ್ರತೆಗೆ ಆಗಮಿಸಿರುವುದು ಗಮನ ಸೆಳೆದಿದೆ. ತಾಲೂಕಿನ ಗಡಿ ಪ್ರದೇಶ, ಸೂಕ್ಷ್ಮವಾದ ಗೇಟುಗಳಲ್ಲಿ ರೈಫಲ್ ಹಿಡಿದು ನಿಂತು ವಾಹನಗಳನ್ನು ಶೋಧಿಸುತ್ತಿದ್ದರು. ಹಿಂದಿ ಭಾಷೆಯಲ್ಲೇ ಪ್ರಶ್ನೆ ಕೇಳುತ್ತಿದ್ದ ಬಿಎಸ್‌ಎಫ್ ಯೋಧರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಲಿಲ್ಲ.
ಆದರೆ, ರಾಜಕೀಯ ಪಕ್ಷದ ಕಾರ್ಯಕರ್ತರಿಗೆ ಮಾತ್ರ ಕಬ್ಬಿಣದ ಕಡ್ಲೆಯಂತಾಗಿದ್ದು ಮಾತ್ರ ನಿಜ. ಚುನಾವಣಾ ಆಯೋಗದ ಈ ಬಾರಿಯ ಕಟ್ಟುನಿಟ್ಟಿನ ಕ್ರಮ ಹೀಗೆ ಮುಂದುವರಿದರೆ ಮುಂದಿನ ಕೆಲವು ಚುನಾವಣೆಯ ಸಮಯದಲ್ಲಾದರೂ ಝಣ, ಝಣ ಕಾಂಚಾಣಕ್ಕೆ ಕಡಿವಾಣ ಬೀಳುತ್ತದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.