'ಮತ ಚಲಾಯಿಸಲು ಮರೆಯಬೇಡಿ'
ನರಸಿಂಹರಾಜಪುರ: ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಎಲ್ಲರೂ ಚುನಾವಣೆಯಲ್ಲಿ ಪಾಲ್ಗೊಂಡು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಲು ಮರೆಯಬಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರೀ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಕರೆ ನೀಡಿದ್ದಾರೆ.
ಪೀಠದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಅತಿಯಾದ ರಾಜಕೀಯ ಸಂಘರ್ಷ ಒಳ್ಳೆಯದಲ್ಲ. ರಾಜಕೀಯ ದುರೀಣರು ಜಾತ್ಯಾತೀತವಾಗಿ ಎಲ್ಲಾ ಸಮುದಾಯದ ಜನತೆಯನ್ನು ಸಮಾನವಾಗಿ ಕಂಡು ಅಭಿವೃದ್ಧಿ ಕಾರ್ಯ ಮಾಡಬೇಕು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅನ್ಯಾಯ, ದೌರ್ಜನ್ಯ ಎಲ್ಲೆಡೆ ನಡೆಯುತ್ತಲೇ ಇದೆ ಎಂದರು.
ಕಾನೂನಿನ ಭೀತಿಯೂ ಇಲ್ಲದಂತಾಗಿ ಸಾಮಾಜಿಕ ಸ್ವಾಸ್ಥ ಕಲುಷಿತಗೊಳ್ಳುತ್ತಿದೆ. ವಿದ್ಯಾವಂತರು ಚುನಾವಣೆಯಲ್ಲಿ ಮತಗಟ್ಟೆಗೆ ಬರುವುದಿಲ್ಲ. ಹೀಗಾಗಿ ಮುಗ್ಧ ಜನರು ರಾಜಕೀಯ ದಬ್ಬಾಳಿಕೆಗೆ ಬಲಿಯಾಗಿ ಆಸೆ, ಆಮಿಷಗಳಿಗೆ, ಹಣ, ಹೆಂಡಕ್ಕೆ ಮತವನ್ನು ಹಂಚಿಕೊಳ್ಳುವುದನ್ನು ಕೇಳಿದ್ದೇವೆ. ಸಾಮಾನ್ಯ ಮತದಾರರಲ್ಲಿ ಜಾಗೃತಿ ಉಂಟು ಮಾಡುವುದು ಬಹಳ ಅಗತ್ಯವಿದೆ ಎಂದು ಹೇಳಿದರು.
ಸತ್ಯವಂತರು, ಪ್ರಾಮಾಣಿಕರು, ಕ್ರಿಯಾಶೀಲತೆಯುಳ್ಳ ರಾಜಕಾರಣಿಗಳು ಅಂಜದೆ, ಅಳುಕದೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಬೇಕು. ರಾಜಕೀಯ ರಂಗದಲ್ಲಿ ಸಾತ್ವಿಕ ಶಕ್ತಿಗಳು ಬೆಳೆಯಬೇಕು ಎಂದು ಅವರು ತಿಳಿಸಿದರು.