'ಸರಬ್ಜಿತ್ ಸಾವಿಗೆ ಪಾಕ್ ನಿರ್ಲಕ್ಷ್ಯ ಕಾರಣ'
ಕ.ಪ್ರ.ವಾರ್ತ್ಣೆ , ಚಿಕ್ಕಮಗಳೂರು , ಮೇ 4
ಪಾಕಿಸ್ತಾನದ ಜೈಲಿನಲ್ಲಿ ಸಹ ಖೈದಿಗಳಿಂದ ಹಲ್ಲೆಗೊಳಗಾದ ಸರಬ್ಜಿತ್ ಸಿಂಗ್ ಅವರ ಸಾವಿಗೆ ಕಾರಣವಾದ ಕೃತ್ಯವನ್ನು ಎಬಿವಿಪಿ ಖಂಡಿಸಿದೆ.
ಪಾಕಿಸ್ತಾನ ಸರ್ಕಾರ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದರಿಂದ ಅವರ ಸಾವಿಗೆ ಕಾರಣವಾಗಿದೆ ಎಂದು ಎಬಿವಿಪಿ ಜಿಲ್ಲಾ ಸಂಚಾಲಕ ದಯಾನಂದ ಗೌಡ ತಿರುಗುಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಮ್ಮ ಕೇಂದ್ರ ಸರ್ಕಾರವು ಕೂಡ ಪಾಕಿಸ್ತಾನದಿಂದ ಅವರನ್ನು ವಾಪಸ್ ಕರೆಸಿಕೊಳ್ಳುವಲ್ಲಿ ವಿಫಲವಾಗಿದೆ ಹಾಗೂ ದೃಢ ನಿರ್ಧಾರ ತೆಗೆದುಕೊಳ್ಳದೇ, ವಿಳಂಬ ನೀತಿ ಅನುಸರಿಸಿದ್ದಕ್ಕೆ ಈ ಘಟನೆಗೆ ಕಾರಣವಾಗಿದೆ. ಕೇಂದ್ರ ಸರ್ಕಾರ ತಕ್ಷಣ ಪಾಕಿಸ್ತಾನ ಎಚ್ಚರಿಕೆ ನೀಡಿ ಈ ದುಷ್ಕೃತ್ಯದಲ್ಲಿ ಭಾಗಿಯಾದ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ದೇಶದ ಪ್ರಧಾನಮಂತ್ರಿ ಮನಮೋಹನ್ಸಿಂಗ್ ಹಾಗೂ ವಿದೇಶಾಂಗ ವ್ಯವಹಾರಗಳ ಖಾತೆಯ ಸಚಿವರು ತಕ್ಷಣ ಎಚ್ಚೆತ್ತು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪಾಕಿಸ್ತಾನದ ಜೊತೆ ಯಾವುದೇ ರಾಜತಾಂತ್ರಿಕ, ವ್ಯವಹಾರಿಕ ಸಂಬಂಧ ಮಾಡಿಕೊಳ್ಳಬಾರದು. ಪಾಕಿಸ್ತಾನದ ಈ ಹೇಡಿ ದುಷ್ಕೃತ್ಯಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.