ಹಣ ಹಂಚುತ್ತಿದ್ದ ಆರೋಪ: ದೂರು, ಪ್ರತಿ ದೂರು
ಕ.ಪ್ರ.ವಾರ್ತೆ , ಕೊಪ್ಪ , ಮೇ 4
ಟಾಟಾ ಸುಮೋ ವಾಹನದಲ್ಲಿ ಕಾಂಗ್ರೆಸ್ ಕಾರ್ಯಕರ್ತರುಗಳು ಬಿಜೆಪಿ ವಿರೋಧಿ ಲೇಖನಗಳನ್ನೊಳಗೊಂಡ ವಾರ ಪತ್ರಿಕೆ ಮತ್ತು ಹಣವನ್ನು ಹಂಚುತ್ತಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು ವಾಹನವೊಂದನ್ನು ತಡೆದು ನಿಲ್ಲಿಸಿದ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಗುಂಪು ಘರ್ಷಣೆ ನಡೆದ ಘಟನೆ ಶುಕ್ರವಾರ ರಾತ್ರಿ ತಾಲೂಕಿನ ಹಾಲ್ಮುತ್ತೂರಿನ ಬಳಿ ಸಂಭವಿದೆ.
ನೀತಿ ಸಂಹಿತೆ ಉಲ್ಲಂಘನಾ ತಂಡ ಸ್ಥಳಕ್ಕೆ ಧಾವಿಸಿ ವಾಹನದ ತಪಾಸಣೆ ಮಾಡಿದ ಸಂದರ್ಭದಲ್ಲಿ ಸುಮೋದಲ್ಲಿ ಮದ್ಯದ ಪ್ಯಾಕೆಟ್, ರು. 10,000, 200 ಸ್ಥಳೀಯ ಪತ್ರಿಕೆಗಳು ಲಭ್ಯವಾಗಿದೆ. ಇದು ಮೇಲ್ನೋಟಕ್ಕೆ ನೀತಿ ಸಂಹಿತೆ ಉಲ್ಲಂಗನೆಯಾಗಿದೆ ಎಂದು ಅಧಿಕಾರಿಗಳು ಪೊಲೀಸರಿಗೆ ವರದಿ ನೀಡಿದ ಆಧಾರದ ಮೇಲೆ ಹರಿಹರಪುರ ಪೊಲೀಸ್ ಠಾಣೆಯಲ್ಲಿ ನವೀನ್ ಕರವಾನೆ ಮತ್ತು ಇನ್ನಿಬ್ಬರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತರನ್ನು ಹಾಲ್ಮತ್ತೂರು ರಸ್ತೆಯಲ್ಲಿ ಅಡ್ಡಗಟ್ಟಿದ ಬಿಜೆಪಿ ಮುಖಂಡ ಜಯಂತ್, ನರೇಂದ್ರ ಮತ್ತಿತರು ಸೇರಿ ಥಳಿಸಿ ನಗದು ಮತ್ತು ಚಿನ್ನಾಭರಣ ದೋಚಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ದೂರು ಮತ್ತು ಪ್ರತಿ ದೂರಗಳನ್ನು ನೀಡಲು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರುಗಳು ಹರಿಹರಪುರ ಪೊಲೀಸ್ ಠಾಣೆಯ ಮುಂದೆ ಜಾಮಯಿಸಿದ್ದರಿಂದ ಕೆಲವು ಉದ್ವಿಘ್ನ ಪರಿಸ್ಥಿತಿ ಉಂಟಾಗಿತ್ತು.