ಉತ್ಸಾಹದ ಮತದಾನ
ತೀರ್ಥಹಳ್ಳಿ: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಶೇ.80 ರಷ್ಟು ಮತದಾನ ನಡೆದಿದೆ. ಕ್ಷೇತ್ರದ ಅತಿ ಸೂಕ್ಷ್ಮ ಮತದಾನ ಕೇಂದ್ರಗಳಲ್ಲೂ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ತೆರಳಿ ಮತ ನೀಡಿದ್ದು ಕಂಡುಬಂದಿತು. ತಾಲೂಕಿನಲ್ಲಿ ಒಟ್ಟು 246 ಮತಗಟ್ಟೆಗಳಿದ್ದು, ಅತಿ ಸೂಕ್ಷ್ಮ ಮತಗಟ್ಟೆಗಳು 44, ಸೂಕ್ಷ್ಮ 63 ಮತ್ತು ಸಾಮಾನ್ಯ 139 ಮತಗಟ್ಟೆಗಳಲ್ಲೂ, ಮತದಾನದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಮತದಾನ ಪ್ರಕ್ರಿಯೆ ಶಾಂತಯುತವಾಗಿತ್ತು.
ಹೆಸರು ನಾಪತ್ತೆ: 1000 ಕ್ಕೂ ಹೆಚ್ಚು ಮತದಾರರ ಹೆಸರುಗಳು ಮತಪಟ್ಟಿಯಿಂದ ನಾಪತ್ತೆಯಾಗಿದ್ದು ಇದರಿಂದಾಗಿ ಹಲವರ ಮತದಾನ ಮಾಡದೆ ನಿರಾಶರಾಗಬೇಕಾಯಿತು. ಪಟ್ಟಣ ಪಂಚಾಯ್ತಿ ಸದಸ್ಯ ಸಂದೇಶ ಜವಳಿಯವರ ಹೆಸರು ಮತಪಟ್ಟಿಯಲ್ಲಿಲ್ಲದ ಕಾರಣ ಮತ ನೀಡಲು ಅವಕಾಶವಾಗದೆ ನಿರಾಶರಾದರು. ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಸೊಪ್ಪುಗುಡ್ಡೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಬಿಜೆಪಿಯ ಆರಗ ಜ್ಞಾನೇಂದ್ರ ಗುಡ್ಡೇಕೊಪ್ಪದ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಕೆಜೆಪಿ ಅಭ್ಯರ್ಥಿ ಮಂಜುನಾಥ ಗೌಡ, ಜೆಡಿಎಸ್ ಅಭ್ಯರ್ಥಿ ಆರ್. ಮದನ್ ಬೆಟ್ಟಮಕ್ಕಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಕ್ಷೇತ್ರಾದ್ಯಂತ ಉತ್ತಮ ಮತದಾನ ನಡೆದಿದ್ದು, ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಮತದಾನ ನಡೆದಿದೆ. ದೂರದ ಊರುಗಳಲ್ಲಿ ಉದ್ಯೋಗದಲ್ಲಿರುವ ಸಾವಿರಕ್ಕೂ ಹೆಚ್ಚು ಮತದಾರರೂ ಈ ಬಾರಿ ತಮ್ಮ ಊರುಗಳಿಗೆ ಮತದಾನ ನೀಡಲೆಂದೇ ಬಂದಿದ್ದು ಉತ್ಸಾಹದಿಂದ ಭಾಗವಹಿಸಿದ್ದಾರೆ.
ತಿಮ್ಮರಾಜುಗೆ ಬೀಳ್ಕೊಡುಗೆ
ನರಸಿಂಹರಾಜಪುರ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕಳೆದ 8 ತಿಂಗಳಿಂದ ಎಸ್ಐ ಆಗಿ ಸೇವೆ ಸಲ್ಲಿಸಿ ನಿವೃತ್ತಗೊಂಡ ತಿಮ್ಮರಾಜು ಅವರನ್ನು ಠಾಣಾ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಕೊಪ್ಪ ಡಿವೈಎಸ್ಪಿ ಡಾ. ಜಗದೀಶ್ ಮಾತನಾಡಿ, ಸರ್ಕಾರಿ ನೌಕರರು ನಿವೃತ್ತಿಯಾಗುವುದು ಸಹಜ ಪ್ರಕ್ರಿಯೆಯಾಗಿದೆ. ತಿಮ್ಮರಾಜು ಅವರು ಹಂತ, ಹಂತವಾಗಿ ಪೊಲೀಸ್ ವೃತ್ತಿಯಲ್ಲಿ ಮೇಲೆ ಬಂದು ಕೊನೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ನಿವೃತ್ತಿ ಗೊಂಡರು. ತಮ್ಮ ಸೇವಾ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಉತ್ತಮ ಕಾರ್ಯನಿರ್ವಹಿಸಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವೃತ್ತ ನಿರೀಕ್ಷಿಕ ಜಿ. ಕೃಷ್ಣಮೂರ್ತಿ ಮಾತನಾಡಿ, ತಿಮ್ಮರಾಜು ಅವರು ತಮಗೆ ನೀಡಿದ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿದ್ದರು ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪಿಎಸ್ಐ ತಿಮ್ಮರಾಜು, ಪೊಲೀಸ್ ಇಲಾಖೆಯ ಸಿಬ್ಬಂದಿಯ ಸಹಕಾರ ಹಾಗೂ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ನನ್ನ ಕರ್ತವ್ಯ ನಿರ್ವಹಿಸಿದೆ. ಸದಾ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿ ತಮ್ಮ ಸ್ವಲ್ಪ ಸಮಯವನ್ನು ಕುಟುಂಬದವರೊಂದಿಗೂ ಕಳೆಯಬೇಕು ಎಂದು ಸಲಹೆ ನೀಡಿದರು. ಅತಿಥಿಗಳಾಗಿ ತಹಸೀಲ್ದಾರ್ ಕೃಷ್ಣಮೂರ್ತಿ ಮತ್ತಿತರರಿದ್ದರು.
ಸಿಡಿಲು ಬಡಿದು ವ್ಯಕ್ತಿ ಸಾವು
ಶಿವಮೊಗ್ಗ: ನಗರದಲ್ಲಿ ಭಾನುವಾರ ಸಡಿಲು ಸಹಿತ ಬಾರಿ ಮಳೆಯಾಗಿದ್ದು, ಈ ವೇಳೆ ಸಿಡಿಲು ಬಡಿದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ದಡಮಘಟ್ಟ ನಿವಾಸಿ ಜಾವೀದ್ (35) ಮೃತಪಟ್ಟವರು. ಇವರು ಮಲವಗೊಪ್ಪದ ಕಾಡಾ ಕಚೇರಿ ಹಿಂಭಾಗದಲ್ಲಿರುವ ಮಾವಿನತೊಪ್ಪಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಘಟನೆ ನಡೆದಿದೆ. ಪ್ರಕರಣ ತುಂಗಾ ನಗರ ಠಾಣೆಯಲ್ಲಿ ದಾಖಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.