ನ.ರಾ. ಪುರದಲ್ಲಿ ಶಾಂತಿಯುತ ಮತದಾನ
ಕ.ಪ್ರ.ವಾರ್ತೆ, ನರಸಿಂಹರಾಜಪುರ, ಮೇ 5
ತಾಲೂಕಿನಲ್ಲಿ ಭಾನುವಾರ ನಡೆದ ವಿಧಾನಸಭೆ ಚುನಾವಣೆಯ ಮತದಾನವು ಶಾಂತಿಯುತವಾಗಿ ಜರುಗಿತು.
ಬೆಳಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ದಾವಿಸಿ ಮತ ಚಲಾಯಿಸುತ್ತಿರುವುದು ಕಂಡು ಬಂತು. ಮಧ್ಯಾಹ್ನ 1 ಗಂಟೆಗೆ ತಾಲೂಕಿನ 94 ಮತಗಟ್ಟೆಗಳಲ್ಲಿ ಶೇ.53 ಮತದಾನವಾಗಿತ್ತು. ಈ ಬಾರಿ ಚುನಾವಣೆಯಲ್ಲಿ ಸಂಜೆ 6 ಗಂಟೆಯವರೆಗೂ ಮತದಾನಕ್ಕೆ ಅವಕಾಶ ನೀಡಿರುವುದರಿಂದ ಪಟ್ಟಣ ಪ್ರದೇಶದಲ್ಲಿ ಸಂಜೆ 5 ಗಂಟೆಯ ನಂತರ ಹೆಚ್ಚು ಮತದಾರರು ಮತ ನೀಡಲು ಮತಗಟ್ಟೆಗೆ ಬಂದಿದ್ದು, ಇದರಿಂದ ಸಂಜೆಯ ಸಮಯದಲ್ಲಿ ಸರತಿಯ ಸಾಲಿನಲ್ಲಿ ನಿಂತು ಮತ ನೀಡಬೇಕಾಯಿತು.
ಸುಗುಮ ಮತದಾನ: ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ಡಿ.ಎನ್. ಜೀವರಾಜ್ ತಮ್ಮ ಹುಟ್ಟೂರಾದ ದ್ವಾರಮಕ್ಕಿಯ ಸಮೀಪದ ಬಡಗಬೈಲು ಶಾಲೆಯಲ್ಲಿ ಮತ ನೀಡಿದರು. ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡರು ಖಾಂಡ್ಯ ಹೋಬಳಿಯ ಬಾಸಾಪುರ ಶಾಲೆಯಲ್ಲಿ ತಮ್ಮ ಮತ ಚಲಾಯಿಸಿದರು. ಈ ಬಾರಿ ಯಾವುದೇ ಮತಗಟ್ಟೆಯಲ್ಲೂ ಮತ ಯಂತ್ರ ಕೈಕೊಡದೆ ಮತದಾನ ಸುಗಮವಾಗಿ ನಡೆಯಿತು.
ಶತಾಯಿಷಿ ಮತದಾನ: ಪಟ್ಟಣದ ಸರ್ಕಾರಿ ಬಾಲಕರ ಶಾಲೆಯಲ್ಲಿ (ಮತಗಟ್ಟೆ 22) ಶತಾಯಷಿ ಪ್ಯಾರಿಜಾನ್ ಎಂಬ ಮಹಿಳೆಯು ಯಾರ ಸಹಾಯವಿಲ್ಲದೆ ಸರತಿಯ ಸಾಲಿನಲ್ಲಿ ಬಂದು ಮತ ಚಲಾಯಿಸಿದರು.
ಮತಗಟ್ಟೆ 22ರ ಬಳಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮುಖಿ, ಪರಸ್ಪರ ತಳ್ಳಾಟ ನಡೆದು ನಂತರ ಎರಡು ಪಕ್ಷದವರು ಪರಸ್ಪರ ಪೊಲೀಸರಿಗೆ ದೂರು ನೀಡಿದರು.
ಹಲ್ಲೆ ಆರೋಪ: ಚುನಾವಣೆಯ ಮುನ್ನಾ ದಿನವಾದ ಶನಿವಾರ ರಾತ್ರಿ ಮುತ್ತಿನಕೊಪ್ಪದಲ್ಲಿ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್ ಅವರ ಕಾರಿನ ಮೇಲೆ ಬಿಜೆಪಿ ಮುಖಂಡ ನೀಲೇಶ್ ಹಾಗೂ ಇತರೆ 5 ಜನ ಸೇರಿ ಒಟ್ಟು 6 ಜನರ ಗುಂಪು ದೊಣ್ಣೆಯಿಂದ ಕಾರಿಗೆ ಹೊಡೆದು ಗ್ಲಾಸ್ ಪುಡಿ ಮಾಡಿದ್ದಾರೆ ಎಂದು ಡಾ.ಕೆ.ಪಿ. ಅಂಶುಮಂತ್ ದೂರು ನೀಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಮುತ್ತಿನಕೊಪ್ಪ ಗ್ರಾಮದ ಶಾಂತಿ ಕಾಲೋನಿಯ ಬಿಜೆಪಿ ಮುಖಂಡ ಅರುಣ ಎಂಬುವರು ಪೊಲೀಸರಿಗೆ ದೂರು ನೀಡಿ, ಶನಿವಾರ ರಾತ್ರಿ ನಾನು ಮನೆಯ ಒಳಗೆ ಇದ್ದಾಗ ಮನೆಯ ಎದುರು ಬಂದ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್ ಹಾಗೂ ಇತರೆ ಕಾಂಗ್ರೆಸ್ನ 5 ಮಂದಿ ಸೇರಿ ಒಟ್ಟು 6 ಜನರ ಗುಂಪು ನನಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ ಎಂದು ದೂರು ನೀಡಿದ್ದಾರೆ.