ನಕ್ಸಲ್ ಪ್ರದೇಶದಲ್ಲಿ ಶಾಂತಿಯುತ ಮತದಾನ
ಶೃಂಗೇರಿ: ತಾಲೂಕಿನ ನಕ್ಸಲ್ ಪೀಡಿತ ಪ್ರದೇಶದಲ್ಲಿ ಭಾನುವಾರ ಶಾಂತಿಯುತ ಮತದಾನ ನಡೆಯಿತು.
ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. ನಕ್ಸಲ್ ಪೀಡಿತ ಪ್ರದೇಶದಲ್ಲಿ ಕಳೆದ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ನಿರಾಸಕ್ತಿ ಕಂಡು ಬಂದಿತು. ಮಧ್ಯಾಹ್ನದ ನಂತರವೇ ಮತದಾನ ಚುರುಕುಗೊಂಡಿತು.
ಶೃಂಗೇರಿ ತಾಲೂಕಿನಲ್ಲಿ ಒಟ್ಟು 49 ಮತಗಟ್ಟೆಗಳಿದ್ದು, ಈ ಪೈಕಿ 21 ಅತಿಸೂಕ್ಷ್ಮ, 7 ಸೂಕ್ಷ್ಮ, 21 ಸಾಮಾನ್ಯ ಮತಗಟ್ಟೆಗಳು.
ನಕ್ಸಲ್ ಪೀಡಿತ ಪ್ರದೇಶಗಳಾದ ನೆಮ್ಮಾರ್, ವಳಲೆ ಮಾವಿನಕಾಡು, ಹರೂರು, ಮಲ್ನಾಡ್, ಕೆರೆ ಪಂಚಾಯ್ತಿ ವ್ಯಾಪ್ತಿಯ ಕಡ್ಕಲ್, ಬಲೆಕಡಿ, ಕೆರೆಕಟ್ಟೆ, ಮರ್ಕಲ್ ಪಂಚಾಯ್ತಿಯ ಹೆಡದಾಳ್, ಸಿಂದೂಡಿ, ಕೋವಿನಬೈಲು ಮತಗಟ್ಟೆಯಲ್ಲಿ ಮತದಾನ ನಡೆಯಿತು.
2004ರಲ್ಲಿ ನಕ್ಸಲ್ ಪೀಡಿತ ಪ್ರದೇಶದಲ್ಲಿ ಚುನಾವಣೆ ನಡೆಯುವ ಸಂದರ್ಭದಲ್ಲಿ ಆತಂಕದ ವಾತಾವರಣ ಇತ್ತು. 2008ರ ವೇಳೆಯಲ್ಲಿ ಈ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಬದಲಾಯಿತು. ಆದರೆ, ಈ ಚುನಾವಣೆಯಲ್ಲಿ ಮಾತ್ರ ಈ ಪ್ರದೇಶದಲ್ಲಿ ಜನರಲ್ಲಿ ಯಾವುದೇ ಆತಂಕ ಕಂಡು ಬರಲಿಲ್ಲ. ಈ ಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿಆರ್ಪಿಎಫ್, ಕೆಎಸ್ಆರ್ಪಿ, ಡಿಎಆರ್ ಹಾಗೂ ಸ್ಥಳೀಯ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
ಜತೆಗೆ ಸೂಕ್ಷ್ಮ ವೀಕ್ಷಕರನ್ನು ನೇಮಕ ಮಾಡಲಾಗಿತ್ತು. ಮಧ್ಯಾಹ್ನ ಎರಡೂವರೆ ಗಂಟೆ ವೇಳೆಗೆ ಶೃಂಗೇರಿ ತಾಲೂಕಿನಲ್ಲಿ ಗುಡುಗು ಸಹಿತ ದಟ್ಟವಾಗಿ ಮೋಡ ಕವಿದ ವಾತಾವರಣ ಇತ್ತು. ಸಂಜೆಗೆ ಸಾಧಾರಣವಾಗಿ ಮಳೆ ಬಂದಿತು. ಬಲವಾಗಿ ಬೀಸಿದ ಗಾಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತು.
ನಕ್ಸಲ್ ಪ್ರದೇಶದಲ್ಲಿ ಹೆಚ್ಚಿನ ಮತದಾನ
ಕ.ಪ್ರ.ವಾರ್ತೆ, ಕೊಪ್ಪ, ಮೇ5 ತಾಲೂಕಿನಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ. ನಕ್ಸಲ್ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಮತದಾನವಾಗಿದೆ ಎಂದು ಚುನಾವಣಾಧಿಕಾರಿ ರತ್ನಕಾರ್ ನಾಯ್ಕ ತಿಳಿಸಿದ್ದಾರೆ.
ಬೆಳಗ್ಗಿನಿಂದ ವಯೋವೃದ್ಧರನ್ನೊಳಗೊಂಡ ಮತದಾರು ಉತ್ಸಾಹಕರಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದರಿಂದ ಬೆಳಗಿನ ವೇಳೆಯಲ್ಲಿ ಚುರುಕಿನ ಮತದಾನ ನಡೆದಿದ್ದು, ಮಧ್ಯಾಹ್ನದ ವೇಳೆ ಮಂದಗತಿಯಿಂದಾಗಿ ಸಾಗಿತ್ತು. ನಂತರದಲ್ಲಿ ಮತ್ತೇ ಅದೇ ವೇಗ ಪಡೆದುಕೊಂಡಿತ್ತು.
ನಕ್ಸಲ್ ಪ್ರದೇಶದ ಮತದಾರು ನಿರಾಂತಕವಾಗಿ ಮತದಾನದಲ್ಲಿ ಪಾಲ್ಗೊಂಡಿದ್ದರಿಂದ ಸಂಜೆ ನಾಲ್ಕು ಗಂಟೆಯ ವೇಳೆಯಲ್ಲಿ ಸರಾಸರಿ ಶೇ.70ರಷ್ಟು ಮತದಾನವಾಗಿದೆ. ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅನುವು ಮಾಡಿಕೊಟ್ಟಿದ್ದರಿಂದ ಕೂಲಿ ಕಾರ್ಮಿಕರು ಕೂಲಿ ಮುಗಿಸಿ ಬಂದು ಮತದಾನ ಮಾಡಿದರು.
ಚುನಾವಣೆಯ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನಡೆಯುವ ಭಾನುವಾರ ಸಂತೆಯನ್ನು ಮುಂದೂಡಲಾಗಿತ್ತು.