ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮುಗಿದ ಮತದಾನ: ಫಲಿತಾಂಶಕ್ಕೆ 2 ದಿನ ಬಾಕಿ

Lingaraj Badiger
Updated On : 6 May 2013, 11:01 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಮೇ 5
ಮತದಾನ ಮಾಡಲು ಬರುವಾಗ ಆನೆ ತುಳಿತಕ್ಕೆ ಓರ್ವ ಬಲಿ, ವೋಟ್ ಹಾಕಿ ಹೊರಗೆ ಬರುತ್ತಿದ್ದಂತೆ ಓರ್ವ ಹೃದಯಾಘಾತದಿಂದ ನಿಧನ, ಎರಡು ಕಡೆಗಳಲ್ಲಿ ಕೈಕೊಟ್ಟ ಮತಯಂತ್ರಗಳು, ಪೊಲೀಸರ ಮೇಲೆ ಹಲ್ಲೆ,  ಮಲೆನಾಡಿನಲ್ಲಿ ಮತದಾನಕ್ಕೆ ಮಳೆಯ ಅಡ್ಡಿ.
- ಇವು ಕಾಫಿಯ ತವರೂರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತದಾನದ ದಿನದ ಮುಖ್ಯಾಂಶಗಳು.
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಭಾನುವಾರ ಶಾಂತಿಯುತವಾಗಿ ಮತದಾನ ನಡೆಯಿತು.
ಮೂಡಿಗೆರೆ ತಾಲೂಕಿನ ಫಲ್ಗುಣಿ ಬಳಿ ನಮೀದ್ ನಜೀರ್ ಮತದಾನ ಮಾಡಲು ಬರುವ ವೇಳೆಯಲ್ಲಿ ಆನೆ ತುಳಿತಕ್ಕೆ ಬಲಿಯಾಗಿದ್ದಾರೆ. ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ಗುಂಪೊಂದು ಲಕ್ಕವಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಸ್ಪೆಕ್ಟರ್ ಹಾಗೂ ಪೊಲೀಸರ ಮತ್ತು ಚುನಾವಣಾ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
ಕಡೂರು ತಾಲೂಕಿನ ಮಚ್ಚೆರಿ ಹಾಗೂ ಕಡೂರು ಪಟ್ಟಣದ ವಾರ್ಡ್ ನಂಬರ್ 18ರಲ್ಲಿ ಮತಯಂತ್ರಗಳು ಕೈಕೊಟ್ಟಿದ್ದರಿಂದ ಸುಮಾರು 27 ನಿಮಿಷಗಳ ಕಾಲ ತಡವಾಗಿ ಮತದಾನ ಆರಂಭವಾಯಿತು. ಕಡೂರು ತಾಲೂಕಿನ ಕೊರಚರಹಟ್ಟಿಯ ನಾಗಪ್ಪ ಅವರು ರಂಗೇನಹಳ್ಳಿಯ  ಮತಗಟ್ಟೆಯಲ್ಲಿ ಮತದಾನ ಮಾಡಿ ಹೊರಗೆ ಬರುವ ವೇಳೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮತದಾನ ಬಹಿಷ್ಕಾರ: ಮೂಡಿಗೆರೆ ತಾಲೂಕಿನ  ಹಳೆಖಾನ್ ಹೊರಟ್ಟಿ ಗ್ರಾಮಸ್ಥರು, ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸದೆ ಇರುವುದನ್ನು ಖಂಡಿಸಿ ಮತದಾನವನ್ನು ಬಹಿಷ್ಕರಿಸಿದ್ದರು. ಮಧ್ಯಾಹ್ನ 1 ಗಂಟೆಯವರೆಗೆ ಈ ಗ್ರಾಮದಲ್ಲಿ ಮತದಾನ ನಡೆದಿರಲಿಲ್ಲ. ಜಿಲ್ಲಾಧಿಕಾರಿ ವಿ. ಯಶವಂತ್ ಹಾಗೂ ಹಿರಿಯ ಅಧಿಕಾರಿಗಳು ಮನವೊಲಿಸಿದ ನಂತರ ಗ್ರಾಮಸ್ಥರು ಮತದಾನ ಮಾಡಿದರು.
ಚಿಕ್ಕಮಗಳೂರು ನಗರದ ವಾರ್ಡ್ ನಂಬರ್ 19ರ ಮಾರ್ಕೆಟ್ ರಸ್ತೆಯ  ಬಡಾವಣೆಯಲ್ಲಿ ವಾಸವಾಗಿರುವ 85 ವರ್ಷದ ವೃದ್ಧೆ ನವನೀತಮ್ಮ ಅವರು ತಮಗೆ ಸರ್ಕಾರದವರು ಮನೆ ನೀಡಿಲ್ಲ ಎಂದು ತಮ್ಮ ಗುಡಿಸಲಿನ ಎದುರು ನಿಂತು ಮತದಾನ ಮಾಡುವುದಿಲ್ಲ ಎಂದು ಹೇಳಿದರು. ಈ ವಿಷಯ ತಿಳಿಯುತ್ತಿದ್ದಂತೆ ರಾಜಕೀಯ ಪಕ್ಷಗಳ ಮುಖಂಡರು ಮನಮೊಲಿಸಿ ಅವರಿಂದ ವೋಟ್ ಮಾಡಿಸುವಲ್ಲಿ ಯಶಸ್ವಿಯಾದರು.
ಮಳೆ ಅಡ್ಡಿ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಪ್ರತಿದಿನ ಮಳೆ ಬರುತ್ತಿದ್ದು, ಭಾನುವಾರವೂ ಕೂಡ ಮಧ್ಯಾಹ್ನದ ನಂತರ  ಮಳೆ ಬಂದಿತು.
ಮೂಡಿಗೆರೆ ಪಟ್ಟಣ ಸೇರಿದಂತೆ ಸುತ್ತಮುತ್ತ ಬಲವಾಗಿ ಬೀಸಿದ ಗಾಳಿಯ ನಡುವೆ ಗುಡುಗು, ಮಿಂಚಿನ ಸಹಿತ ಮಳೆ ಬಂದಿತು. ಕೊಪ್ಪ, ಶೃಂಗೇರಿ,ಚಿಕ್ಕಮಗಳೂರು ಹಾಗೂ ಎನ್.ಆರ್.ಪುರ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಮಳೆ ಬಂದಿತು. ಮತದಾನಕ್ಕೆ ಸಂಜೆ 6 ಗಂಟೆಯವರೆಗೆ ಕಾಲಾವಕಾಶ ನೀಡಿದರು. ಮಳೆ ಮಧ್ಯಾಹ್ನವೇ ಬಂದಿದ್ದರಿಂದ ಕೆಲವು ಮತಗಟ್ಟೆಗಳಿಗೆ ಮತದಾರರು ಹೋಗಲು ತೊಂದರೆಯಾಯ್ತು.
ಬಯಲುಸೀಮೆಯಲ್ಲಿ ನೀರಸ: ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಆರಂಭದಲ್ಲಿ ಮತದಾರರು ಮತದಾನ ಮಾಡಲು ಮತಗಟ್ಟೆ ಕೇಂದ್ರಗಳಲ್ಲಿ ಸಾಲು ಸಾಲಾಗಿ ನಿಂತಿರುವುದು ಕಂಡು ಬಂದಿತು. ಆದರೆ, ಮಧ್ಯಾಹ್ನದ ವೇಳೆಗೆ ಮತದಾನದ ಪ್ರಮಾಣ ಸ್ವಲ್ಪ ಮಟ್ಟಿಗೆ ಇಳಿಮುಖವಾಗಿತ್ತು. ಮಧ್ಯಾಹ್ನ  12 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಸರಾಸರಿ ಶೇ. 23 ರಷ್ಟು ಮಾತ್ರ ಮತದಾನವಾಗಿತ್ತು.
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಚಿಕ್ಕಮಗಳೂರು, ಕಡೂರು ಹಾಗೂ ತರೀಕೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಬಹಳಷ್ಟು ಇಳಿಮುಖವಾಗಿತ್ತು. ಮಧ್ಯಾಹ್ನ 3 ಗಂಟೆಯ ವೇಳೆಗೆ ತರೀಕೆರೆ ಹಾಗೂ ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಶೇ. 41 ರಷ್ಟು ಮತದಾನವಾಗಿತ್ತು. ಕಡೂರಿನಲ್ಲಿ ಶೇ. 48, ಮೂಡಿಗೆರೆಯಲ್ಲಿ ಶೇ. 52, ಶೃಂಗೇರಿ ಕ್ಷೇತ್ರದಲ್ಲಿ ಶೇ. 61 ರಷ್ಟು ಮತದಾನವಾಗಿತ್ತು.
ಮಧ್ಯಾಹ್ನ 4 ಗಂಟೆಗೆ ಅಂದರೆ ಒಂದು ಗಂಟೆಯ ಅವಧಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮತದಾನವಾಗಿಲ್ಲ. ತರೀಕೆರೆ ಮತ್ತು ಚಿಕ್ಕಮಗಳೂರು, ಮೂಡಿಗೆರೆ, ಕಡೂರು ಕ್ಷೇತ್ರಗಳಲ್ಲಿ ಒಂದು ಗಂಟೆಯ ಅವಧಿಯಲ್ಲಿ ಶೇ. 7 ರಷ್ಟು ಮಾತ್ರ ಮತದಾನವಾಗಿತ್ತು. ಇದೇ  ಕಾಲಾವಧಿಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಶೇ. 6 ರಷ್ಟು ಮಾತ್ರ ಮತದಾನವಾಗಿತ್ತು. 4 ಗಂಟೆಗೆ ಜಿಲ್ಲೆಯಲ್ಲಿ ಸರಾಸರಿ ಶೇ. 55 ರಷ್ಟು  ಮತದಾನ ನಡೆದಿತ್ತು. ಮತದಾನಕ್ಕೆ ಇನ್ನು ಮೂರು ಗಂಟೆಗಳು ಬಾಕಿ ಇದ್ದರೂ ಮಳೆ  ಮತ್ತು ಗುಡುಗು, ಮಿಂಚು, ಸಿಡಿಲಿನ ಅಬ್ಬರ ಜನರನ್ನು ಮತಗಟ್ಟೆ ಕೇಂದ್ರಗಳಿಗೆ ಹೋಗದಂತೆ ಅಡ್ಡಿ ಪಡಿಸಿರುವುದು ಕಂಡು ಬಂದಿತು.
ಒಟ್ಟಾರೆ ಜಿಲ್ಲೆಯಲ್ಲಿ ಶಾಂತಿಯುತವಾಗಿ  ಮತದಾನ ನಡೆದಿದ್ದು, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಮೇ 8 ರಂದು ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement