ವಿದ್ಯುತ್ ಉತ್ಪಾದನೆಗೆ ಆದ್ಯತೆ ಅಗತ್ಯ: ಡಾ. ಅನಂತ ಪದ್ಮನಾಭ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಮೇ 5
ಗಾಳಿ, ನೀರು, ಬೆಳಕು ಹೇಗೆ ಅವಶ್ಯಕವೋ ಹಾಗೆಯೇ ವಿದ್ಯುತ್ಶಕ್ತಿ ಎಲ್ಲಾ ಚಟುವಟಿಕೆಗಳಿಗೂ ಮೂಲ. ಹಾಗಾಗಿ ವಿದ್ಯುತ್ಶಕ್ತಿಯಿಂದಲೇ ದೇಶದ ಅಭಿವೃದ್ಧಿ ಎಂದು ಮೈಸೂರಿನ ಎನ್ಐಇ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಟಿ. ಅನಂತ ಪದ್ಮನಾಭ ಅವರು ಹೇಳಿದ್ದಾರೆ.
ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುತ್ ವಿಭಾಗದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ತಾಂತ್ರಿಕ ಪ್ರಬಂಧ ಮಂಡನಾ ಸಮಾವೇಶ ಈ ಬೆಳಕು-13 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭೂಮಿಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವುದು ವಿದ್ಯುತ್ ಗುರುತ್ವಶಕ್ತಿ ಹಾಗಾಗಿ ವಿದ್ಯುತ್ಗೆ ಹೆಚ್ಚಿನ ಮಹತ್ವ. ವಿದ್ಯುತ್ ವಿಭಾಗವನ್ನು ಪ್ರತಿನಿಧಿಸುತ್ತಿರುವ ವಿದ್ಯಾರ್ಥಿಗಳು ದೇಶದಲ್ಲಿಯೇ ಅತ್ಯುತ್ತಮ ಎಂದರು.
20 ಲಕ್ಷ ಮೆಗಾವ್ಯಾಟ್ ಬೇಕು: ಭಾರತದಲ್ಲಿ ವಿದ್ಯುತ್ಶಕ್ತಿಯ ಉತ್ಪಾದನಾ ಅಭಿವೃದ್ಧಿ ಹೆಚ್ಚಾಗಿ ಆಗದಿರುವುದು ಹೆಚ್ಚಿನ ಸಮಸ್ಯೆಗೆ ಕಾರಣ. 2030ರ ವೇಳೆಗೆ 20 ಲಕ್ಷ ಮೆಗಾವ್ಯಾಟ್ಗಳ ಅವಶ್ಯಕತೆ ಇದೆ. ಹಾಗಾಗಿ ಹೆಚ್ಚಿನ ಅಭಿವೃದ್ಧಿಯ ಕಡೆ ಗಮನ ಹರಿಸಬೇಕಾಗಿದೆ. ಸ್ಮಾರ್ಟ್ ಗ್ರಿಡ್, ನ್ಯಾನೋ ಟೆಕ್ನಾಲಜಿಯ ಬಗ್ಗೆ ವಿದ್ಯಾರ್ಥಿಗಳು ದೃಷ್ಟಿಹರಿಸಬೇಕಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿ.ಕೆ. ಸುಬ್ರಾಯ ಮಾತನಾಡಿ, ಈ ವೇದಿಕೆ ನಿಮ್ಮಗಳ ಅಂತರಂಗದ ಬುದ್ಧಿಶಕ್ತಿಯನ್ನು ಪ್ರದರ್ಶಿಸಲು ಇರುವುದು. ವಿದ್ಯುತ್ಶಕ್ತಿ ಎಲ್ಲಾ ಚಟುವಟಿಕೆಗಳಿಗೂ ಅವಶ್ಯಕ. ಹಾಗಾಗಿ ಶಕ್ತಿಯ ಮೂಲಗಳನ್ನು ಪರಾಮರ್ಶಿಸಿ ರೂಪುರೇಷೇಗಳನ್ನು ಸಿದ್ಧಪಡಿಸಿ ಹೆಚ್ಚಿನ ಗುಣಮಟ್ಟದ ತಾಂತ್ರಿಕತೆಯ ಅಭಿವೃದ್ಧಿಯ ಕಡೆ ಗಮನಹರಿಸುವ ಅವಶ್ಯಕತೆ ಇದೆ ಎಂದರು.
ಗಣಿತಶಾಸ್ತ್ರವು ಬರೀ ಪರೀಕ್ಷೆಗಾಗಿ ಪರಿಗಣಿಸದೆ ಅವಿಷ್ಕಾರಗಳಲ್ಲಿ ಬಳಸಿಕೊಂಡು ಹೆಚ್ಚಿನ ಸಾಧನೆಯನ್ನು ಮಾಡಿ ಎಂದು ಕರೆ ನೀಡಿದರು.
ವಿದ್ಯುತ್ ವಿಭಾಗದ ಮುಖ್ಯಸ್ಥರಾದ ಪ್ರೊ. ಕೆ.ಆರ್. ಮೋಹನ್ ಸ್ವಾಗತಿಸಿದರು. ಸಂಚಾಲಕ ಪ್ರೊ. ಬಿ. ಕಾಂತರಾಜ್ ಪ್ರಸ್ತಾವಿಕವಾಗಿ ಮಾತನಾಡಿದರು. ಯಶಸ್ವಿನಿ ವಂದಿಸಿದರು. ಸುಪ್ರಿಯಾ ಮತ್ತು ಸಂಗೀತ ಕಾರ್ಯಕ್ರಮ ನಿರೂಪಿಸಿದರು.