ಕಡಿಮೆ ಮತದಾನಕ್ಕೆ ಬೇಸರ
ಕ.ಪ್ರ.ವಾರ್ತೆ , ಚಿಕ್ಕಮಗಳೂರು ಮೇ 6
ಗ್ರಾಮಾಂತರ ಪ್ರದೇಶದಲ್ಲಿದ್ದ ಮತದಾರರ ಉತ್ಸಾಹ ನಗರದಲ್ಲಿ ಇಲ್ಲದಿರುವುದು ಹಾಗೂ ಕಡಿಮೆ ಮತದಾನ ಆಗಿರುವುದು ಬೇಸರದ ಸಂಗತಿ ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ನಗರದ ಮತದಾರರು ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾರೆ. ಆದರೆ, ಮತಗಟ್ಟೆಗೆ ಬಂದು ಮತದಾನ ಮಾಡದಿರುವ ಅವರ ವರ್ತನೆ ಖಂಡನೀಯ. ವ್ಯವಸ್ಥೆಯ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕತೆ ಇರುವುದಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅನುಭವದ ಮಾನದಂಡ ಇಟ್ಟುಕೊಂಡು ಹೇಳುವುದಾದರೆ ಕಡ್ಡಾಯ ಮತದಾನಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ತರುವ ಅವಶ್ಯಕತೆ ಇದೆ. ಈ ಕುರಿತು ಎಲ್ಲಾ ರಾಷ್ಟ್ರೀಯ ಪಕ್ಷಗಳು ನಾಗರಿಕರನ್ನು ಕಡ್ಡಾಯವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ತಿದ್ದುಪಡಿಗೆ ಆಗ್ರಹಿಸುವಂತೆ ಸಲಹೆ ನೀಡಿದರು.
ಆನ್ ಲೈನ್ ಮತದಾನಕ್ಕೂ ಅವಕಾಶ ಮಾಡಿಕೊಡಬೇಕು. ಅದು, ಅಸಾಧ್ಯವೆನಲ್ಲಾ, ಚುನಾವಣಾ ಆಯೋಗ ಮುನ್ನೆಚ್ಚರಿಕೆ ವಹಿಸಿದ್ದರೂ ಕೂಡ ಮತದಾರರ ಪಟ್ಟಿಯ ಗೊಂದಲ ಮುಂದುವರೆದಿತ್ತು. ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇಕಡಾವಾರು ಮತದಾನ ಕಳೆದ ಬಾರಿಗಿಂತ ಉತ್ತಮ ಎಂಬುದು ಸಮಾಧಾನದ ಸಂಗತಿ ಎಂದರು.
ವಿಶ್ವಾಸವಿದೆ: ಮತದಾನದ ನಂತರ ಪಕ್ಷದ ಕಾರ್ಯಕರ್ತರು ಮತದಾರರ ಭಾವನೆಗಳನ್ನು ನೋಡಿದಾಗ ನಾನು ಚುನಾವಣಾ ಪೂರ್ವದಲ್ಲಿ ಹೇಳಿದಂತೆ ಒಳ್ಳೆಯ ಅಂತರದ ಗೆಲವು ಬಿಜೆಪಿಗೆ ದೊರೆಯುತ್ತದೆ. 58 ಸಾವಿರ ಮತಗಳನ್ನು ತೆಗೆದುಕೊಳ್ಳುತ್ತೇನೆಂದು ಹೇಳಿದ್ದೆ. ಗ್ರಾಮಾಂತರ ಪ್ರದೇಶದಲ್ಲಿ 36 ರಿಂದ 37 ಸಾವಿರ, ನಗರ ಪ್ರದೇಶದಲ್ಲಿ 21 ರಿಂದ 23 ಸಾವಿರ ಮತಗಳಿಸುವ ವಿಶ್ವಾಸ ಇದೆ ಎಂದು ತಿಳಿಸಿದರು.
ಕಡೆ ಗಳಿಗೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಕೆಜೆಪಿ ಪಕ್ಷಗಳು ಬಿಜೆಪಿಯನ್ನು ಸೋಲಿಸುವ ಆಂತರಿಕ ಮೈತ್ರಿ ಮಾಡಿಕೊಂಡಿದ್ದವು. ಈ ಎಲ್ಲಾ ಮೂರು ಶಕ್ತಿಗಳನ್ನು ಎದುರಿಸುವ ಸಾಮರ್ಥ್ಯ ನಮ್ಮ ಸಂಘಟನಾ ಕಾರ್ಯಕರ್ತರಲ್ಲಿ ಇದ್ದುದ್ದರಿಂದ, ಅಭಿವೃದ್ಧಿ ಕೆಲಸಗಳು ರಕ್ಷಾ ಕವಚವಾಗಿ ಕಾಪಾಡಿದ್ದರಿಂದ ಚುನಾವಣಾ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.
ಬಿಜೆಪಿಗೆ ಆಶೀರ್ವಾದ: ಜಾತಿ ಗೋಡೆಗಳನ್ನು ಎಣಿಸುವ ಕೆಲಸ ಕೆಲವು ಮತಗಟ್ಟೆಗಳಲ್ಲಿ ಆಗಿರಬಹುದು. ಸಾರ್ವತ್ರಿಕವಾಗಿ ಜಾತಿ ಮೀರಿ ಜನ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ ಎಂದ ಅವರು, ಬಿಜೆಪಿಗೆ ರಾಜ್ಯದಲ್ಲಿ ಇದೊಂದು ಕಠಿಣ ಚುನಾವಣೆಯಾಗಿತ್ತು. 1991ರ ಲೋಕಸಭಾ ಚುನಾವಣೆಯಿಂದ ಬಿಜೆಪಿ ವೇಗ ಪಡೆದುಕೊಂಡು ತದನಂತರದಲ್ಲಿ ಇಲ್ಲಿಯವರೆಗೂ ಏರುಗತಿಯಲ್ಲಿ ಪ್ರಗತಿ ಕಂಡಿದೆ.
ಪಕ್ಷದಲ್ಲಿ ನಡೆದ ಆಂತರಿಕ ಕಚ್ಚಾಟದಿಂದ ಪಕ್ಷಕ್ಕೆ ಸ್ವಲ್ಪ ಹಾನಿಯಾಗಿದೆ. ಆದರೆ, ನಮ್ಮದು ಸೈದ್ಧಾಂತಿಕ ಚಳುವಳಿಯ ಹಿನ್ನಲೆಯಲ್ಲಿ ಬಂದ ಪಕ್ಷವಾಗಿದ್ದರಿಂದ ನಮ್ಮ ವೇಗದ ಗತಿಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದರು.
ಈ ಚುನಾವಣೆಯಲ್ಲಿ ಬಿಜೆಪಿಗೆ ಕಡಿಮೆ ಸ್ಥಾನ ಬಂದು, ಬೇರೊಂದು ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಂದರ್ಭ ಬಂದರೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಬಿಜೆಪಿಗೆ ಯಾವ ರಾಜಕೀಯ ಪಕ್ಷದ ಬಗ್ಗೆ ಅಸ್ಪೃಶ್ಯತಾ ಭಾವನೆ ಇಲ್ಲ. ಆದರೂ, ಅಂತಿಮವಾಗಿ ಪಕ್ಷದ ಕಾರ್ಯಕಾರಿ ಸಮಿತಿ ಈ ಬಗ್ಗೆ ತೀರ್ಮಾನಗೊಳ್ಳಲಿದೆ ಎಂದು ಹೇಳಿದರು.