ಕುಡಿಯುವ ನೀರಿಗೆ ಭಾರಿ ಅಭಾವ
ಕ.ಪ್ರ.ವಾರ್ತೆ, ತರೀಕೆರೆ. ಮೇ.6
ವಿಧಾನಸಭಾ ಚುನಾವಣಾ ಕಾವು ಕಡಿಮೆಯಾಗುತ್ತಿದ್ದಂತೆ ಮತ್ತೊಂದು ಕಡೆಯಿಂದ, ತರೀಕೆರೆ ತಾಲೂಕಿನ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಈ ಮೊದಲೇ ಇದ್ದ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ. ಜನ ಮತ್ತು ಜಾನುವಾರುಗಳು ಕುಡಿಯುವ ನೀರಿಗಾಗಿ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ತಾಲೂಕು ಅಡಳಿತ ಟ್ಯಾಂಕರ್ಗಳಲ್ಲಿ ಎಷ್ಟೇ ನೀರು ಸರಬರಾಜು ಮಾಡುತ್ತಿದ್ದರೂ, ನೀರಿನ ಕೊರತೆ ಕಾರಣ ಅವೆಲ್ಲವೂ ಅಲ್ಪಸ್ವಲ್ಪವಾಗಿ ಕಾಣುತ್ತಿದೆ. ತಾಲೂಕಿನಾದ್ಯಂತ ಬಹುತೇಕ ಕೆರೆ ಕಟ್ಟೆಗಳು, ಬಾವಿ, ಹಳ್ಳ, ತೊರೆಗಳೆಲ್ಲಾ ನೀರಿಲ್ಲದೆ ಬತ್ತಿ ಹೋಗಿವೆ. ಇದರಿಂದ ತೋಟಗಳಲ್ಲೂ ಬೋರ್ವೆಲ್ಗಳಲ್ಲಿ ನೀರು ತಳ ಮುಟ್ಟಿದೆ. ಮೋಟರ್ ಪಂಪ್ ಓಡಿಸಿದರೂ ಪೈಪುಗಳಲ್ಲಿ ತೆಳ್ಳಗೂ ಕೂಡ ನೀರು ಹರಿಯದಂತಹ ಭೀಕರ ಪರಿಸ್ಥಿತಿ ಎದುರಿಸುವಂತಾಗಿದೆ.
ಮಳೆ ಇಲ್ಲವೇ ಇಲ್ಲ: ಮೇ ತಿಂಗಳು ಪ್ರಾರಂಭವಾದರೂ ತಾಲೂಕಿನ ಯಾವುದೇ ಭಾಗದಲ್ಲಿ ಮಳೆಯಾಗುವ ಮಾತು ಹಾಗಿರಲಿ, ದಟ್ಟ ಮೋಡ ಕಟ್ಟಿದ ವಾತಾವರಣದ ಸುದ್ದಿಯೂ ಇಲ್ಲದಂತಾಗಿದೆ. ಸೂರ್ಯೋದಯದಿಂದಲೇ ೆಪ್ರಾರಂಭವಾಗುವ ಬಿಸಿಲಿನ ಪ್ರಖರತೆ ಸಂಜೆ 6ರ ತನಕವೂ ಇರುತ್ತದೆ. ಹೀಗಾಗಿ ತರೀಕೆರೆ ಬಹುತೇಕ ಭೂ ಪ್ರದೇಶದ ಅಂತರ್ಜಲ ಸಂಪೂರ್ಣ ಕುಸಿದು ಹೋಗಿದೆ.
ಕಳೆದ 2-3 ವರ್ಷದಿಂದಲೂ ತಾಲೂಕಿನಾದ್ಯಂತ ಮಳೆ ಪ್ರಮಾಣ ಗಣನೀಯವಾಗಿ ಕುಸಿದಿದೆ. ಜೊತೆಗೆ ಬೇಸಿಗೆ ಕಾಲದ ಬಿಸಿಲಿನ ಪ್ರಖರತೆಯೂ ಉಷ್ಣಾಂಶವು ಹೆಚ್ಚಾಗಿ ಭೂಮಿಯ ತೇವಾಂಶವೂ ಉಲ್ಲೇಖಾರ್ಹವಾಗಿ ಕುಸಿದಿದೆ.
ಬೋರ್ವೆಲ್ ಖಾಲಿ: ತಾಲೂಕಿನ ಲಿಂಗದಹಳ್ಳಿ ಹೋಬಳಿಯ ವಿಶೇಷವಾಗಿ ಗಿರಿ ಪ್ರದೇಶಗಳಾದ ಕೆಮ್ಮಣಗುಂಡಿ-ಕಲ್ಲತ್ತಿಗಿರಿ- ಹೊಸಪೇಟೆ, ಬಳ್ಳಾವರ ಈ ಪ್ರದೇಶಗಳು ತಾಲೂಕಿನ ಏಕೈಕ ಜಲಾನಯನ ಪ್ರದೇಶಗಳು ಅದರಲ್ಲೂ ಈ ಭೂಪ್ರದೇಶಗಳು ಭೌಗೋಳಿಕವಾಗಿ ಎತ್ತರದಲ್ಲಿರವುದರಿಂದ ಇಲ್ಲಿ ಬಿದ್ದ ಮಳೆಯಿಂದ ವಿವಿಧ ಕೆರೆ-ಹಳ್ಳ- ಕೊಳ್ಳಗಳಿಂದ ಹರಿದು ಬರುವ ನೀರು ತಾಲೂಕಿನ ಇತರ ಭೂಪ್ರದೇಶಗಳ ಮತ್ತು ಕೆರೆಗಳ ಅಂತರ್ಜಲ ಹೆಚ್ಚಿಸುತ್ತವೆ ಎಂಬುದು ವೈಜ್ಞಾನಿಕ ಸತ್ಯ.
ಆದರೆ ವಿಶೇಷವೆಂದರೆ ಈ ಸಾರಿ ತಲೆದೋರುತ್ತಿರುವ ಬಿಸಿಲಿನ ಪ್ರಖರತೆಯಿಂದ ಗಿರಿ ಪ್ರದೇಶಗಳ ಭೂಮಿಯಲ್ಲಿ ಇರಬಹುದಾದ ಅಂತರ್ಜಲವೂ ತೀರ ಕಡಿಮೆಯಾಗಿದೆ ಎಂಬುದು ಬೋರ್ವೆಲ್ ಕೊರೆಸಿದಾಗ ಅನುಭವಕ್ಕೆ ಬರುತ್ತಿದೆ, ಈ ಭಾಗದಲ್ಲಿ ಭೂಮಿಯ 800 ಅಡಿ ಆಳಕ್ಕೆ ಕೊರೆದರೂ ಬರೀ ಮರಳು ಮಿಶ್ರಿತ ಮಣ್ಣು ಕಲ್ಲು ಸಿಗುತ್ತದೆಯೇ ಹೊರತು ನೀರು ಸಿಗುತ್ತಿಲ್ಲ.
ನೀರು ಹೊತ್ತ ಟ್ಯಾಂಕರ್ ಗ್ರಾಮದೊಳಕ್ಕೆ ಪ್ರವೇಶಿಸುತ್ತಿದ್ದಂತೆಯೇ ನೀರು ಸಂಗ್ರಹಿಸಲು ಜನರು ಪಡುವ ಪಾಡು ನೋಡಿದರೆ ಕರುಳು ಚುರಕ್ಕೆನ್ನುತ್ತದೆ. ತರೀಕೆರೆ ಪಟ್ಟಣದ ಹೊರವಲಯದ ರಂಗಾಪುರದಲ್ಲಿ ಕುಡಿಯುವ ನೀರಿಗಾಗಿ ಜನರು ಸಂಕಷ್ಟ ಪಡುತ್ತಿದ್ದಾರೆ. ಇದೇ ರೀತಿಯ ವಾತಾವರಣ ತಾಲೂಕಿನಾದ್ಯಂತ ಬಹುತೇಕ ಎಲ್ಲ ಗ್ರಾಮಗಳಲ್ಲೂ ಕಾಣಿಸಿಕೊಂಡಿದೆ.
ಪ್ರತಿನಿತ್ಯ ಟ್ಯಾಂಕರ್ ನೀರು: ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಪ್ರತಿಯೊಂದು ಗ್ರಾಮಗಳಲ್ಲೂ ಆಯಾ ಗ್ರಾಮದ ಜನಸಾಂದ್ರತೆ ಅನುಸರಿಸಿ ಪ್ರತಿನಿತ್ಯ ಟ್ಯಾಂಕರ್ಗಳಲ್ಲಿ ಜನ ಮತ್ತು ಜಾನುವಾರುಗಳಿಗೆ ಹೆಚ್ಚು ಹೆಚ್ಚಾಗಿ ಟ್ಯಾಂಕರ್ಗಳಲ್ಲಿ ಕುಡಿಯುವ ನೀರನ್ನು ಸಮೀಪದ ಭದ್ರಾ ನದಿಯಿಂದಲೇ ತಾಲೂಕು ಆಡಳಿತ ಸರಬರಾಜು ಮಾಡಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಪರಿಸ್ಥಿತಿ ಹೀಗೆ ಆದರೆ ತಾಲೂಕಿನ ಬಯಲು ಪ್ರದೇಶಗಳಲ್ಲಿ ಕಂಡುಬರುತ್ತಿರುವ ಜಲಕ್ಷಾಮದಿಂದಾಗಿ ಈ ಭಾಗದಲ್ಲಿರುವ ಜಾನುವಾರುಗಳನ್ನು ಮಲೆನಾಡು ಪ್ರದೇಶ ಅಥವಾ ನೀರಿರುವ ಕಡೆಗೆ ವಲಸೆ ಕಳಿಸಬೇಕಾಗುತ್ತದೆ ಎಂದು ರೈತರು ತಿಳಿಸಿದ್ದಾರೆ. ಮಳೆಯೊಂದೇ ಈ ಎಲ್ಲ ಸಮಸ್ಯೆಗಳಿಗೆ ಉತ್ತರ ಹೇಳಬೇಕಾಗಿದೆ.
--
-ಅನಂತ ನಾಡಿಗ್