ತರೀಕೆರೆ: ಶೇ. 77.49 ಮತದಾನ
ತರೀಕೆರೆ: ಭಾನುವಾರ ನೆಡೆದ ತರೀಕೆರೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಶೇ.77.49 ರಷ್ಟು ಮತದಾನ ನೆಡೆದಿದೆ ಎಂದು ಚುನಾವಣಾಧಿಕಾರಿ ಅನುರಾಧ ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರದಲ್ಲಿ 1,59,863 ಮತದಾರರಿದ್ದು ಅದರಲ್ಲಿ 1,23,873 ಮತದಾರರು ಮತದಾನ ಮಾಡಿದ್ದು, ಅಮೃತಾಪುರ ಮತಗಟ್ಟೆ ಸಂಖ್ಯೆ 46 ಮತ್ತು ಬಂಬೂಸರ ಮತಗಟ್ಟೆ ಸಂಖ್ಯೆ 42ರಲ್ಲಿ ಶೇ.92..42ರಷ್ಟು ಅಧಿಕ ಮತದಾನವಾಗಿದ್ದರೆ, ಅಜ್ಜಂಪುರ ಸರ್ಕಾರಿ ಜೂ.ಕಾಲೇಜು ಮತಗಟ್ಟೆ ಸಂಖ್ಯೆ 151ರಲ್ಲಿ ಕನಿಷ್ಠ 53.99 ರಷ್ಟು ಮತದಾನ ನೆಡೆದಿದೆ ಎಂದು ಅವರು ತಿಳಿಸಿದ್ದಾರೆ.
ಕಡೂರು ಶೇ.76.80
ಕಡೂರು: ಕಡೂರು ವಿಧಾನಸಭಾ ಕ್ಷೇತ್ರದ ಚುನಾವಣೆ ಶಾಂತಿಯುತವಾಗಿ ಮುಗಿದು ಶೇ.76.80 ರಷ್ಟು ಮತದಾನವಾಗುವ ಮೂಲಕ ಕ್ಷೇತ್ರದಲ್ಲಿ ಒಟ್ಟು 1,40,355 ಮತದಾರರು ಮತ ಚಲಾಯಿಸಿದ್ದಾರೆ. ಈ ಬಾರಿ ಕಡೂರು ಕ್ಷೇತ್ರದಲ್ಲಿ ಹೊಸದಾಗಿ ಮತ ಸೇರ್ಪಡೆ ಆಗುವ ಮೂಲಕ 1,82,754 ಮತದಾರರು ಇದ್ದು, ಅದರಲ್ಲಿ 93,606 ಪುರುಷ ಮತದಾರರು ಮತ್ತು 89,142 ಮಹಿಳಾ ಮತದಾರರು ಇದ್ದಾರೆ. ಮೇ 5 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ 72,932 ಪುರುಷ ಮತದಾರರು ಮತ್ತು 67,423 ಮಹಿಳಾ ಮತದಾರರು ಸೇರಿದಂತೆ ಒಟ್ಟು 140,356 ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಶೇ. 76.80 ರಷ್ಟು ಮತದಾನ ನಡೆದಿದೆ. ಇನ್ನು ಗ್ರಾಮಾಂತರ ಪ್ರದೇಶಗಳಲ್ಲೂ ಶೇ. 60ಕ್ಕಿಂತ ಹೆಚ್ಚಿನ ಮತದಾನ ನಡೆಯುವ ಮೂಲಕ ಶೇ.90 ಕ್ಕಿಂತಲೂ ಹೆಚ್ಚು ಮತದಾನ ನಡೆದಿರುವುದು ಈ ಬಾರಿಯ ಕಡೂರು ವಿಧಾನಸಭಾ ಚುನಾವಣೆಯ ವಿಶೇಷವಾಗಿದೆ.
ಮತದಾನ ಮಾಡದ
ಮಾಜಿ ಶಾಸಕ!
ತರೀಕೆರೆ: ವಿಧಾನಸಭಾ ಕ್ಷೇತ್ರದ ಬಂಡಾಯ ಕಾಂಗ್ರೆಸ್ ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಬಿ.ಆರ್. ನೀಲಕಂಠಪ್ಪ ಅವರು ಭಾನುವಾರ ನಡೆದ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಮಾಡಿಲ್ಲ. ಬೆಟ್ಟದಹಳ್ಳಿ ಮತಗಟ್ಟೆಯಲ್ಲಿ ಹೆಸರಿದ್ದು, ಆದರೆ ಮತದಾನದಲ್ಲಿ ಭಾಗವಹಿಸಲಿಲ್ಲವೆಂದು ಅವರು ತಿಳಿಸಿದ್ದಾರೆ. ಯಾಕೆ ಮತದಾನದಲ್ಲಿ ಭಾಗವಹಿಸಲಿಲ್ಲ ಎಂಬ ಕಾರಣವನ್ನು ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸುವುದಾಗಿ ತಿಳಿಸಿದ್ದಾರೆ.
ಭೀಮನೇರಿಯಲ್ಲಿ ಶೇ.97 ಮತದಾನ
ಸಾಗರ: ತಾಲೂಕಿನ ಭೀಮನೇರಿಯ ಮತಗಟ್ಟೆ ಸಂಖ್ಯೆ 35ರಲ್ಲಿ ಅತಿಹೆಚ್ಚು ಅಂದರೆ ಶೇ.97 ಮತದಾನವಾಗಿದೆ. ಇಲ್ಲಿ ಒಟ್ಟು 280 ಮತದಾರರಿದ್ದು, ಈ ಪೈಕಿ 272 ಜನರು ಮತ ಚಲಾಯಿಸಿದ್ದಾರೆ. ಸಾಗರ ಪಟ್ಟಣದ ಎ.ಕೆ.ಕಾಲೋನಿ ಮತಗಟ್ಟೆ ಸಂಖ್ಯೆ 71ರಲ್ಲಿ ಅತಿ ಕಡಿಮೆ ಅಂದರೆ ಶೇ.39ರಷ್ಟು ಮತದಾನವಾಗಿದೆ. ಇಲ್ಲಿ 534 ಮತದಾರರ ಪೈಕಿ ಕೇವಲ 211ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ.