ದಣಿವಾರಿಸಿಕೊಂಡ ಅಭ್ಯರ್ಥಿಗಳು
ಕ.ಪ್ರ.ವಾರ್ತೆ ಚಿಕ್ಕಮಗಳೂರು ಮೇ 6
ಸತತವಾಗಿ ಒಂದು ತಿಂಗಳಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಅಭ್ಯರ್ಥಿಗಳು ಸೋಮವಾರ ರಿಲ್ಯಾಕ್ಸ್ ಮೂಡ್ನಲ್ಲಿದ್ದರು.
ಬಿಜೆಪಿ ಅಭ್ಯರ್ಥಿ ಸಚಿವ ಸಿ.ಟಿ. ರವಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಶಾಂತೇಗೌಡ, ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಧರ್ಮೇಗೌಡ ಅವರು ಮನೆಯಲ್ಲಿಯೇ ಇದ್ದು ಕಾಲ ಕಳೆದರು.
ಸಕಾಲದಲ್ಲಿ ನಿದ್ದೆ, ಊಟ ಇಲ್ಲದೆ ಊರೂರು, ಬಡಾವಣೆಗಳನ್ನು ಸುತ್ತುತ್ತಾ, ಪಕ್ಷದ ಕಾರ್ಯಕರ್ತರು, ಮುಖಂಡರೊಂದಿಗೆ ಅಭ್ಯರ್ಥಿಗಳು ಬಿಜಿಯಾಗಿದ್ದರು. ಅವರು ಮನೆಗಳಿಂದ ಹೊರಡಲು, ಮರಳಿ ಮನೆ ಸೇರಲು ನಿರ್ಧಿಷ್ಟವಾದ ಸಮಯ ಇರಲಿಲ್ಲ. ಅವರ ಪತ್ನಿಯರು ಸಹ ಕೊನೆ ಕ್ಷಣದಲ್ಲಿ ಚಿಕ್ಕಮಗಳೂರು ಕ್ಷೇತ್ರವನ್ನು ಸುತ್ತಾಡಿ ಮತಯಾಚನೆ ಮಾಡಿದ್ದರು. ಇಷ್ಟು ದಿನ ಮನೆಯಲ್ಲಿ ನೆಮ್ಮದಿಯಿಂದ ಕುಳಿತುಕೊಳ್ಳಲು ಅವಕಾಶ ಸಿಕ್ಕಿರಲಿಲ್ಲ.
ಭಾನುವಾರ ರಾತ್ರಿಯವರೆಗೆ ಚುನಾವಣೆಯ ಮೂಡ್ನಲ್ಲಿದ್ದ ಅಭ್ಯರ್ಥಿಗಳು, ಮಾನಸಿಕವಾಗಿ ತಳಮಳ ಅನುಭವಿಸಿದ್ದರು. ದೈಹಿಕವಾಗಿಯೂ ಸುಸ್ತಾಗಿದ್ದರು. ಇವುಗಳಿಂದ ಸೋಮವಾರ ಹೊರಗೆ ಬಂದಿದ್ದರು. ಮನೆಯಲ್ಲಿಯೇ ಇದ್ದು ಕುಟುಂಬದವರೊಂದಿಗೆ ದಿನ ಕಳೆದರು.
ಊರಿಗೆ ತೆರಳಿದರು: ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ತಮಿಳುನಾಡಿನ ಪೊಲೀಸರು ಆಗಮಿಸಿದ್ದರು.
ಭಾನುವಾರದಂದು ಅವರ ಕರ್ತವ್ಯ ಮುಗಿದಿದ್ದು, ರಾತ್ರಿ ನಗರದಲ್ಲಿಯೇ ಇದ್ದು, ಸೋಮವಾರ ಬೆಳಿಗ್ಗೆ ತಮ್ಮ ಊರುಗಳಿಗೆ ತೆರಳಿದರು. ಜಿಲ್ಲೆಯ ಪೊಲೀಸರು, ಭಾನುವಾರ ರಾತ್ರಿಯೇ ತಮ್ಮ ತಮ್ಮ ಊರುಗಳಿಗೆ ತೆರಳಿದರು.
ನಗರದ ಐಡಿಎಸ್ಜಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು, ಮತಯಂತ್ರಗಳಿರುವ ಕೊಠಡಿಗಳಿಗೆ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಹೊರ ಭಾಗದಲ್ಲಿ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಕಂದಾಯ ಇಲಾಖೆಯ ನೌಕರರು ಮತ ಎಣಿಕೆ ಕೇಂದ್ರದಲ್ಲಿ ಚುನಾವಣಾ ಕರ್ತವ್ಯದಲ್ಲಿ ತೊಡಗಿದ್ದರು.