'ಬಿಜೆಪಿ ಅಭಿವೃದ್ಧಿಯಿಂದಾಗಿ ಜಯ'
ಕ.ಪ್ರ.ವಾರ್ತೆ, ಕಡೂರು, ಮೇ 6
ರಾಜ್ಯದ ಜನ ಸಾಮಾನ್ಯರ ಪರವಾಗಿ ಬಿಜೆಪಿ ಸರ್ಕಾರವು ರೂಪಿಸಿ ಜಾರಿಗೆ ತಂದ ಜನಪರ ಸಾಧನೆಗಳು ಹಾಗೂ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಡಾ ವೈ.ಸಿ. ವಿಶ್ವನಾಥ್ ಕೈಗೊಂಡಿರುವ ಸಮಗ್ರ ಅಭಿವೃದ್ಧಿಯಿಂದ ಕಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೀರೂರು ದೇವರಾಜ್ ಅವರಿಗೆ ಮತದಾರರು ಚುನಾವಣೆಯಲ್ಲಿ ಆಶೀರ್ವಾದ ಮಾಡಿದ್ದು ಅವರು ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಅರೇಕಲ್ ಪ್ರಕಾಶ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಬಿಜೆಪಿ ಸರ್ಕಾರವು ಜನ ಸಾಮಾನ್ಯರ ಪರವಾಗಿ ನೂರಾರು ಕಾರ್ಯಕ್ರಮಗಳನ್ನು ಜಾರಿಗೆ ತಂದು ಅನೇಕ ಜನಪರ ಯೋಜನೆಗಳನ್ನು ರೂಪಿಸಿದೆ. ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ, ವೃದ್ಧರಿಗೆ ವೃದ್ಧಾಪ್ಯ ವೇತನದ ಸಂಧ್ಯಾ ಸುರಕ್ಷಾ,ಮಕ್ಕಳಿಗೆ ಸೈಕಲ್ ವಿತರಣೆ ಸೇರಿದಂತೆ ಮತ್ತು ರಾಜ್ಯದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಮತ್ತು 25 ಸಾವಿರದವರೆಗೆ ರೈತರ ಸಾಲಮನ್ನಾ ಸೇರಿದಂತೆ ಅನೇಕ ಜನಪ್ರಿಯ ಯೋಜನೆಗಳನ್ನು ರೂಪಿಸಿರುವುದರಿಂದ ಕ್ಷೇತ್ರದ ಮತದಾರರು ದೇವರಾಜುರವರಿಗೆ ಈಗಾಗಾಲೇ ಮತ ನೀಡಿದ್ದು ಅವರ ಗೆಲುವು ನಿಶ್ಚಿತ ಎಂದರು.
ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಶಾಸಕರಾದ ಡಾ ವೈ.ಸಿ. ವಿಶ್ವನಾಥ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದಿಂದ ಕೋಟ್ಯಂತರ ರೂ. ಅನುದಾನ ತಂದು ಮಾಡಿದ ಅಭಿವೃದ್ಧಿ, ಪಾಲಿಟೆಕ್ನಿಕ್ ಮತ್ತು ಶೈಕ್ಷಣಿಕ ಕೇಂದ್ರಗಳು, ಸಮುದಾಯ ಭವನಗಳು, ಶಾಲಾ ಕಟ್ಟಡಗಳು, ಕಾಲೇಜು ಸೇರಿದಂತೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಂದಾಗಿ ಬೀರೂರು ದೇವರಾಜುರ ಗೆಲುವು ನಿಶ್ಚಯ ಎಂದು ಹೇಳಿದರು.