ಸಾಂಬಾರು ಮಂಡಳಿ ಘಟಕ ಆರಂಭ
ಶೃಂಗೇರಿ: ಕೊಪ್ಪದ ಸಾಂಬಾರು ಮಂಡಳಿ ಘಟಕದಿಂದ ಪಟ್ಟಣದ ಕೃಷಿ ಹಾಗೂ ಭೂ ಅಭಿವೃದ್ಧಿ ಬ್ಯಾಂಕಿನಲ್ಲಿ ನೂತನವಾಗಿ ವಿಸ್ತರಣಾ ಘಟಕವನ್ನು ತೆರೆಯಲಾಗಿದೆ. ಪಿಸಿಎಆರ್‌ಡಿ ಬ್ಯಾಂಕಿನ ಸಭಾಂಗಣದಲ್ಲಿ ಪ್ರತಿ ಸೋಮವಾರ ಕಚೇರಿ ಕಾರ್ಯನಿರ್ವಹಿಸಲಿದೆ. ಅಂದು ಕೊಪ್ಪ ಕಚೇರಿ ವಿಸ್ತರಣಾಧಿಕಕಾರಿ ಕೃಷಿಕರಿಗೆ ಮಂಡಳಿಯ ಯೋಜನೆಗಳು, ಏಲಕ್ಕಿ, ಕಾಳುಮೆಣಸು ಕೃಷಿ ಕುರುತು ಮಾಹಿತಿ ನೀಡಲಿದ್ದಾರೆ. ಈ ಭಾಗದ ಬೆಳೆಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕ್ಷೇತ್ರಧಿಕಾರಿಗಳು ಮನವಿ ಮಾಡಿದ್ದಾರೆ.
ಶೃಂಗೇರಿಯಲ್ಲಿ ಗುಡುಗು ಸಹಿತ ಸಾಧಾರಣ ಮಳೆ
ಶೃಂಗೇರಿ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಭಾನುವಾರ ಸಂಜೆ ಗುಡುಗು ಸಹಿತ ಸಾಧಾರಣ ಮಳೆ ಸುರಿದಿದೆ. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದಿಂದಲೇ ಗುಡುಗು ಸಿಡಿಲಿನ ಆರ್ಭಟ ಆರಂಭವಾಯಿತು. ಕೆಲವೆಡೆ ಧಾರಾಕಾರ ಮಳೆ ಸುರಿದರೆ,ನೆಮ್ಮಾರು, ಕೆರಕಟ್ಟೆ, ಕಿಗ್ಗ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಸಂಜೆ ಆರಂಭವಾದ ಗುಡುಗು ಸಹಿತ ಮಳೆ ಮಂದುವರೆದಿತ್ತು. ಮಧ್ಯಾಹ್ನದಿಂದ ಕಡಿತಗೊಂಡ ವಿದ್ಯುತ್ ಸಂಪರ್ಕ ಸೋಮವಾರ ಬೆಳಗಿನವರೆಗೂ ಮುಂದುವರೆದಿತ್ತು. ಹಗಲು ರಾತ್ರಿ ವಿದ್ಯುತ್ ಇಲ್ಲದ ಕಾರಣ ಗ್ರಾಹಕರು ಪರದಾಡಬೇಕಾಯಿತು. ಸೋಮವಾರ ಮೋಡಕವಿದ ವಾತಾವರಣವಿತ್ತು.