ಹೊಟೇಲ್‌ಗಳಲ್ಲಿ ಗೌಜುಗ ಹಕ್ಕಿ ಮಾಂಸ ಮಾರಾಟ
ಚಿಕ್ಕಮಗಳೂರು: ನಗರದ ಕೆಲವು ನಾನ್ ವೆಜ್ ಹೋಟೆಲ್‌ಗಳಲ್ಲಿ ಮಾಂಸ ಪ್ರಿಯರಿಗೆ ಗೌಜುಗ ಹಕ್ಕಿ ಮಾಂಸ ಬೇಯಿಸಿ ನೀಡಲಾಗುತ್ತಿದೆ. ಇಲ್ಲಿನ ಹೋಟೆಲ್ ಒಂದರಲ್ಲಿದ್ದ ಎರಡು ಗೌಜುಗಹಕ್ಕಿಗಳನ್ನು ಅರಣ್ಯ ಇಲಾಖೆಯವರು ವಶಕ್ಕೆ ತೆಗೆದುಕೊಂಡು ಹೋಟೆಲ್ ಮಾಲೀಕನನ್ನು ಬಂಧಿಸಿದ್ದಾರೆ.
ಗೌಜುಗ ಹಕ್ಕಿ ಮಾಂಸದ ಒಂದು ಪ್ಲೇಟಿಗೆ 100 ರುಪಾಯಿ. ನಗರದ ಕೆಲವು ಕೋಳಿ, ಕುರಿ, ಮಾರಾಟ ಅಂಗಡಿಗಳಲ್ಲೂ ಗೌಜುಗಹಕ್ಕಿಗಳ ಅಕ್ರಮ ಸಂಗ್ರಹಣೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಚಿಕ್ಕಮಗಳೂರು ಅರಣ್ಯ ಸಂಚಾರಿ ಪೊಲೀಸ್ (ಫಾರೆಸ್ಟ್ ಸೆಲ್) ಭಾನುವಾರ ಕಾರ್ಯಾಚರಣೆ ನಡೆಸಿ ರತ್ನಗಿರಿ ರಸ್ತೆಯ ಹೋಟೆಲ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 2 ಗೌಜುಗ ಹಕ್ಕಿಗಳನ್ನು ಪಂಚರದ ಸಮೇತ ವಶಕ್ಕೆ ತೆಗೆದುಕೊಂಡು ಹೋಟೆಲ್ ಮಾಲೀಕ ಮಹಮ್ಮದ್ ಉರ್ ರೆಹಮಾನ್‌ನನ್ನು ಬಂಧಿಸಿ ವಿಚಾರಣೆ ನಡೆಸಿ ವನ್ಯಜೀವಿ ಸಂರಕ್ಷಣೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಗೌಜುಗಹಕ್ಕಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಶೆಡ್ಯೂಲ್ 4 ರಲ್ಲಿ ಗುರುತಿಸಲಾಗಿದ್ದು, ಸಹಜವಾಗಿ ಅರಣ್ಯ ಪ್ರದೇಶಗಳಲ್ಲಿ ಕಂಡು ಬರುತ್ತವೆ. ಇವುಗಳನ್ನು ಬಲೆ ಹಾಕಿ ಜೀವಂತವಾಗಿ ಹಿಡಿದು ನಗರದ ಹೋಟೆಲ್‌ಗಳಿಗೆ, ಮಟನ್ ಸ್ಟಾಲ್‌ಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ವಿಚಾರಿಸಿದರೆ ಫಾರಂನಲ್ಲಿ ಅಭಿವೃದ್ಧಿಪಡಿಸಿದ ತಳಿಯೆಂದು ಹೇಳಿ ನಿಜ ಸಂಗತಿ ಮರೆಮಾಚಲಾಗುತ್ತಿತ್ತು. ಈ ಹಕ್ಕಿ ಸಾಕಾಣೆಗೆ ಭಾರತೀಯದಲ್ಲಿ ಯಾವುದೇ ಅನುಮತಿಯಿಲ್ಲ. ಫಾರಂ ಮಾಡಲು ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ವಯ ಅವಕಾಶವಿಲ್ಲ.