ದತ್ತನಿಗೆ ಒಲವು ತೋರಿದ ಮತದಾರ
ಕಡೂರು ಕೃಷ್ಣಮೂರ್ತಿ
ಕ.ಪ್ರ.ವಾರ್ತೆ, ಕಡೂರು, ಮೇ.8 ಜಾತಿ ರಾಜಕಾರಣ ಅಳಿಸಿ, ಪ್ರೀತಿ ರಾಜಕಾರಣ ಬೆಳೆಸಿ ಎನ್ನುವ ಘೋಷಣೆಗೆ ಕಡೂರು ವಿಧಾನಸಭಾ ಕ್ಷೇತ್ರದ ಮತದಾರರು ಬೆಲೆ ನೀಡಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ. ದತ್ತ ಅವರನ್ನು ಗೆಲ್ಲಿಸುವ ಮೂಲಕ ಕಡೂರು ಕ್ಷೇತ್ರದ ರಾಜಕಾರಣದ ಇತಿಹಾಸದಲ್ಲಿ ಪ್ರೀತಿ ರಾಜಕಾರಣ ದಾಖಲೆ ಮಾಡಿತು.
2007 ರಲ್ಲಿ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನಿಂದ ದ ಶಾಸಕರಾಗಿದ್ದ ಕೆ.ಎಂ. ಕೃಷ್ಣಮೂರ್ತಿಯವರು ಸಿದ್ದರಾಮಯ್ಯನವರ ಬೆಂಬಲಿಗರಾಗಿ ಜೆಡಿಎಸ್ ತೊರೆದ ಹಿನ್ನೆಲೆಯಲ್ಲಿ ಕಡೂರು ಕ್ಷೇತ್ರಕ್ಕೆ ಆಕಸ್ಮಿಕವಾಗಿ ಕಾಲಿಟ್ಟ ದತ್ತ ಜೆಡಿಎಸ್ ಕಟ್ಟುವ ಜೊತೆಯಲ್ಲಿ ಆರಂಭದಲ್ಲಿಯೇ ತಾಪಂ ಚುನಾವಣೆ ಎದುರಿಸುವ ಮೂಲಕ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯ ರಾಜಕಾರಣ ಮಾಡುತ್ತಾ ತಳವೂರಿದರು.
ವಿಶೇಷ ಘೋಷಣೆ: ಕ್ಷೇತ್ರದ ಜನರಿಗೆ ಹೊಸ ರೀತಿಯ ಜಾತಿ ರಾಜಕಾರಣ ಅಳಿಸಿ ಪ್ರೀತಿ ರಾಜಕಾರಣ ಬೆಳೆಸಿ ಎನ್ನುವ ಘೋಷಣೆ ನೀಡಿ, ಇಡೀ ಕ್ಷೇತ್ರ ಸಂಚರಿಸುತ್ತಾ ಜನ ಸಾಮಾನ್ಯರ ಮನಸ್ಸಿನಲ್ಲಿ ದತ್ತಣ್ಣ ಎಂದು ಕರೆಸಿಕೊಳ್ಳುತ್ತಲೇ ಜನಪ್ರಿಯರಾಗುತ್ತ ರಾಜಕಾರಣ ಮಾಡಿದರು.
2013 ರ ಮೇ 5 ರ ಚುನಾವಣೆಯಲ್ಲಿ 68,733 ಮತ ನೀಡಿದ ಮತದಾರ ಪ್ರಭುಗಳು ಕೈ ಹಿಡಿದಿದ್ದಾರೆ. ಈ ಮೂಲಕ ಕಡೂರು ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿಯೇ ಹಿಂದೆಂದೂ ಕೂಡ 42,433ರಷ್ಟು ಮತಗಳ ಅಂತರದಿಂದ ಯಾರೂ ಗೆಲುವು ಸಾಧಿಸಿರಲಿಲ್ಲ. ಆ ಸಾಧಾನೆ ಮಾಡಿದವರು ದತ್ತ ಮಾತ್ರ.
ಕಡಿಮೆ ಮತದಾರರ ಅಭ್ಯರ್ಥಿ: ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ವೀರಶೈವರು ಮತ್ತು ಕುರುಬ ಸಮುದಾಯದವರೇ ಶಾಸಕರಾಗಿ ಆಯ್ಕೆಯಾಗುತ್ತಿದ್ದ ಈ ಕ್ಷೇತ್ರದಲ್ಲಿ ಜನರ ಮನಸ್ಸು ಮತ್ತು ಪ್ರೀತಿ ಗಳಿಸುವ ಮೂಲಕ ಕಡೂರು ಕ್ಷೇತ್ರದಲ್ಲಿ ಕೇವಲ ಒಂದೂವರೆ ಸಾವಿರದಷ್ಟು ತಮ್ಮ ಬ್ರಾಹ್ಮಣ ಸಮುದಾಯದ ಮತ ಹೊಂದಿರುವ ದತ್ತರವರ ಆಯ್ಕೆಯೇ ಸಾಕ್ಷಿಯಾಗಿ ಇತಿಹಾಸದ ಮೈಲುಗಲ್ಲಾಯಿತು.
ದತ್ತರವರು ತಮ್ಮ ಸ್ವಗ್ರಾಮ ಕಡೂರು ವಿಧಾನಸಭಾ ಕ್ಷೇತ್ರದ ಯಗಟಿಯಿಂದ ಹೋಗಿ ಬೆಂಗಳೂರಿನಲ್ಲಿ ನೆಲೆಸಿ ರಾಜ್ಯದಲ್ಲಿ ಜೆಡಿಎಸ್ ಇಬ್ಬಾಗವಾದಾಗ ರಾಮಕೃಷ್ಣ ಹೆಗಡೆಯವರ ಜೊತೆ ಹೋಗದೆ ತಮ್ಮ ಸ್ವಾಮಿ ನಿಷ್ಟೆಯನ್ನು ದೇವೇಗೌಡರಿಗೆ ವ್ಯಕ್ತಪಡಿಸಿ, ಸಾಮಾನ್ಯ ಕಾರ್ಯಕರ್ತರಾಗಿ, ಜೆಡಿಎಸ್ ರಾಜ್ಯ ವಕ್ತಾರರಾಗಿ ಮೂರು ದಶಕಕ್ಕೂ ಹೆಚ್ಚು ಕಾಲ ರಾಜ್ಯ ರಾಜಕಾರಣದಲ್ಲಿ ಇದ್ದರು.
ವಿಭಿನ್ನ ರಾಜಕೀಯ: ಬದಲಾದ ರಾಜಕೀಯದಲ್ಲಿ ಕಡೂರು ರಾಜಕೀಯ ಪ್ರವೇಶಿಸಿದ ದತ್ತ, ಜನ ಸಾಮಾನ್ಯರ ಒಡನಾಡಿಯಾಗಿ ತನ್ನ ಸ್ಪಂದನೆಯ ಮೂಲಕ ಕ್ಷೇತ್ರದಲ್ಲಿ ಊಹೆಗೂ ನಿಲುಕದ ರೀತಿಯಲ್ಲಿ ವಿಭಿನ್ನ ರಾಜಕೀಯ ಆರಂಭಿಸಿ 2008 ರಲ್ಲಿ ಕಡೂರು ಪುರಸಭೆಯನ್ನು ಜೆಡಿಎಸ್ ತೆಕ್ಕೆಗೆ ತೆಗೆದುಕೊಂಡು ಅದೇ ವರ್ಷ ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ತಮ್ಮ ವಿಪಸದಸ್ಯರ ಅವಧಿಯಲ್ಲಿ ಕ್ಷೇತ್ರಕ್ಕೆ ಅನುದಾನ ತಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನಿಧಿಯಿಂದ ಅನುದಾನ ತಂದು ಮಾಡಿ ವಿವಿಧ ಅಭಿವೃದ್ಧಿ ಮತ್ತು ಜನಸಾಮಾನ್ಯರ ಕಷ್ಟ ಕೋಟಲೆಗಳ ಮತ್ತು ಕಾಯಿಲೆಗಳಿಂದ ಬಳಲಿದವರಿಗೆ ಚಿಕಿತ್ಸೆ ಮತ್ತು ಇನ್ನಿತರ ರೀತಿಯಲ್ಲಿ ಜನರು ದತ್ತರವರನ್ನು ಮತ್ತಷ್ಟು ಹತ್ತಿರದಿಂದ ಗುರುತಿಸುವಂತಾಯಿತು.
ಸೋಲನ್ನೇ ಸವಾಲಾಗಿ ಸ್ವೀಕಾರ: 2008ರ ಸೋಲನ್ನು ಸವಾಲಾಗಿ ಸ್ವೀಕರಿಸಿದ ದತ್ತ, 2010 ರಲ್ಲಿ ನಡೆದ ಕಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರವೇ ಕಡೂರು ಕ್ಷೇತ್ರಕ್ಕೆ ಲಗ್ಗೆಯಿಟ್ಟು ಕೋಟ್ಯಂತರ ರು.ಗಳಲ್ಲಿ ನಡೆಸಿದ ಅಬ್ಬರದ ಚುನಾವಣೆಯಲ್ಲಿ 46 ಸಾವಿರ ಮತ ಪಡೆದು ಮತ ಏರಿಕೆಯಾಗಿ ಜೆಡಿಎಸ್ಗೆ ಕ್ಷೇತ್ರದಲ್ಲಿ ಭದ್ರ ಬುನಾದಿ ಹಾಕಿದಂತಾಯಿತು.
ವಿಧಾನಪರಿಷತ್ ಸದಸ್ಯರ ಅವಧಿಯಲ್ಲಿ ಹಿಂಬಾಗಿಲಿನಿಂದ ಬಂದವರು ಎಂಬ ಕೆಲವರ ಕೊಂಕು ಮಾತಿನಿಂದಲೂ ಬೇಸರಪಟ್ಟುಕೊಳ್ಳದಿದ್ದ ದತ್ತ, ಇದೀಗ ಜನರಿಂದ ಆಯ್ಕೆಯಾದ ಶಾಸಕನಾಗಿ ಮುಂಬಾಗಿಲಿಂದ ಪ್ರವೇಶ ಪಡೆದ ಜನಪ್ರತಿನಿಧಿಯಾಗಿದ್ದಾರೆ.