ನೋಟು ಕೊಟ್ರು, ವೋಟೂ ಕೊಟ್ರು: ವೈ.ಎಸ್.ವಿ.ದತ್ತಾ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಮೇ 8
ನಮ್ಮ ಕ್ಷೇತ್ರದ ಮತದಾರರು ನನಗೆ ನೋಟು ಕೊಟ್ರು, ವೋಟೂ ಕೂಟ್ರು...
ಇದು, ಕಡೂರು ಕ್ಷೇತ್ರದಲ್ಲಿ ಜಯಗಳಿಸಿದ ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ.ದತ್ತಾ ಅವರ ವಿಶೇಷತೆ. ಮತ ಎಣಿಕೆಯ ಫಲಿತಾಂಶ ಪ್ರಕಟವಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದತ್ತಾ, ಕಡೂರು ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ಕುಟುಂಬಗಳು ಬೆರಳೆಣಿಕೆಯಷ್ಟು. ಆದರೆ, ಇಲ್ಲಿನ ಮತದಾರರು ಪ್ರಜ್ಞಾವಂತರು, ವಿಚಾರವಂತರು. ಜಾತಿ, ಹಣ, ತೊಳ್ಬಲ ಇಲ್ಲದೆ ರಾಜಕಾರಣ ಮಾಡಬಹುದು ಎಂಬುದನ್ನು ನನ್ನನ್ನು ಗೆಲ್ಲಿಸುವ ಮೂಲಕ ತೋರಿಸಿಕೊಟ್ಟಿದ್ದಾರೆ. ಪ್ರೀತಿ, ಕ್ರೀಯಾಶೀಲ ಸ್ಪಂದನ ವ್ಯಕ್ತಿಗೆ ಮತ ನೀಡಿದ್ದಾರೆ. ಜನ್ಮ ಜನ್ಮಕ್ಕೂ ಇಲ್ಲಿನ ಜನರಿಗೆ ಋಣಿಯಾಗಿರುತ್ತೇನೆ ಎಂದರು. ದತ್ತ ಸಾಲಗಾರ, ಆತನ ಬಳಿ ಹಣ ಇಲ್ಲವೆಂದು ಮತದಾರರು 100 ರಿಂದ 10 ಸಾವಿರದವರೆಗೂ ಹಣ ಕೊಟ್ಟು, ವೋಟು ಕೊಟ್ಟಿದ್ದಾರೆ. ನನ್ನನ್ನು ಗೆಲ್ಲಿಸುವ ಮೂಲಕ ಪ್ರಜಾಪ್ರಭುತ್ವ, ಜನತಂತ್ರದ ತಿರುಳು ಹೇಗಿರುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು. ಕಡೂರು ತಾಲೂಕು ಬರ ಪೀಡಿತ ಪ್ರದೇಶ. ಈಗ ಅಸ್ತ್ರ ಸಿಕ್ಕಿದೆ. ಇಲ್ಲಿನ ನೆಲ ಹಸಿರುಗೊಳಿಸಲು ನನ್ನ ಇತಿಮಿತಿಯೊಳಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.