ಮುಗಿಲು ಮುಟ್ಟಿದ ವಿಜಯೋತ್ಸವ
ಕ.ಪ್ರ.ವಾರ್ತೆ, ಕಡೂರು, ಮೇ 8
ಮುಗಿಲು ಮುಟ್ಟಿದ ಜಯಘೋಷ, ಕಿವಿಗಡಚ್ಚಿಕ್ಕುವ ಪಟಾಕಿ ಸದ್ದು, ಸುಡು ಬಿಸಿಲನ್ನು ಲೆಕ್ಕಿಸದ ಕಾದು ನಿಂತಿದ್ದ ಸಾವಿರಾರು ಜನರು ತಮ್ಮ ನಾಯಕನ್ನು ಕಂಡ ಕೂಡಲೇ ಸಂತೋಷ ಭರಿತರಾಗಿ ಬರಮಾಡಿಕೊಂಡು ಘೋಷಣೆ ಕೂಗುತ್ತಾ ವಿಜಯ ಸಾಧಿಸಿ ಬಂದ ಜೆಡಿಎಸ್ನ ವೈ.ಎಸ್.ವಿ. ದತ್ತರವರ ವಿಜಯೋತ್ಸವನ್ನು ಪಟ್ಟಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರತಿಸ್ಪರ್ಧಿ ಕೆಜೆಪಿಯ ಬೆಳ್ಳಿ ಪ್ರಕಾಶ್ ಅವರಿಗಿಂತ 42,433 ಮತಗಳ ಅಂತರದಿಂದ ದತ್ತರವರು ಗೆಲುವು ಸಾಧಿಸಿದ ವಿಷಯ ತಿಳಿಯುತ್ತಿದ್ದಂತೆಯೇ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸತೊಡಗಿದರು. ಕಡೂರು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಭಂಢಾರಿ ಶ್ರೀನಿವಾಸ್, ಕೆ.ಹೆಚ್. ಲಕ್ಕಣ್ಣ, ತಾಲೂಕು ಅಲ್ಪ ಸಂಖ್ಯಾತರ ವಿಭಾಗದ ಅಧ್ಯಕ್ಷ ಎನ್. ಇಮಾಮ್, ಕೆ.ಎಸ್. ತಿಪ್ಪೇಶ್ ನೇತೃತ್ವದಲ್ಲಿ ಕಡೂರು ಪಟ್ಟಣದ ಮರವಂಜಿ ವೃತ್ತದಲ್ಲಿ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬೈಕ್ ರ್ಯಾಲಿ: ನೂರಾರು ಬೈಕುಗಳಲ್ಲಿ ಜೆಡಿಎಸ್ ಬಾವುಟದೊಂದಿಗೆ ಬೈಕ್ ರ್ಯಾಲಿ ನಡೆಸಲಾಯಿತು. ನೂರಾರು ಕಾರ್ಯಕರ್ತರು ಪಟ್ಟಣದ ಎಲ್ಲೆಡೆ ಮೆರವಣಿಗೆ ನಡೆಸಿ ಕದಂಬ ವೃತ್ತ, ಕೆ.ಎಲ್.ವಿ. ವೃತ್ತಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಚಿಕ್ಕಮಗಳೂರಿನಲ್ಲಿ ಮತ ಎಣಿಕೆ ಕೇಂದ್ರದಿಂದ ಕಡೂರಿಗೆ ಆಗಮಿಸುವಾಗ ಮಾರ್ಗ ಮದ್ಯದ ಸಖರಾಯಪಟ್ಟಣ, ಜಿಗಣೇಹಳ್ಳಿ, ಸರಸ್ವತಿಪುರ, ಕಂಸಾಗರ, ಚಿಕ್ಕಪಟ್ಟಣಗೆರೆ, ಬಂಡಿಕೊಪ್ಪಲು ಮಾರ್ಗವಾಗಿ ಸಾವಿರಾರು ಜನರೊಂದಿಗೆ ತೆರೆದ ವಾಹನದಲ್ಲಿ ಕಡೂರಿಗೆ ಆಗಮಿಸಿದ ದತ್ತರನ್ನು ಪಟ್ಟಣದ ಕನಕ ವೃತ್ತದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಬರಮಾಡಿಕೊಂಡು ಹೂಮಾಲೆ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ವಿಜಯೋತ್ಸವ: ಈ ಸಂದರ್ಭದಲ್ಲಿ ಶಿವಮೊಗ್ಗ ಬೆಂಗಳೂರು ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ಥವ್ಯಸ್ತವಾಯಿತು. ಮರವಣಿಗೆಯು ಬೀರೂರಿಗೆ ತೆರಳಿತು. ವಿಜಯೋತ್ಸವದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ, ಜೆಡಿಎಸ್ ಯುವ ಘಟಕದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಪ್ರಸನ್ನ, ಕಾರ್ಯದರ್ಶಿ ಗಂಗಾಧರನಾಯ್ಕ, ಮುಖಂಡರಾದ ಡಿ. ಪ್ರಶಾಂತ್, ಹೆಚ್. ಉಮೇಶ್, ಗಿರೀಶ್ ಉಪ್ಪಾರ್, ಸೀಗೇಹಡ್ಲು ಹರೀಶ್, ಜಿಗಣೇಹಳ್ಳಿ ನೀಲಕಂಠಪ್ಪ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.