ಕೆರೆಗಳಲ್ಲಿ ನೀರಿಲ್ಲದೆ ಕಂಗಾಲಾದ ಮೀನು ಕೃಷಿಕ
ಕ.ಪ್ರ.ವಾರ್ತೆ, ತರೀಕೆರೆ, ಮೇ 10
ಅಸ್ಲಿ ಮಳೆಗೆ ಸಸ್ಲಿ ಮೀನು ಗುಡ್ಡ ಏರಿತಂತೆ (ಆಸ್ಲೇಷ ಮಳೆಗೆ ಮರಿ ಮೀನು ಗುಡ್ಡ ಏರಿತಂತೆ) ಇದು, ಮಲೆನಾಡು ಪ್ರದೇಶದಲ್ಲಿ ಧೋ ಎಂದು ದಿನವಿಡೀ ಸುರಿಯುತ್ತಿದ್ದ ಮಳೆಯನ್ನು ನೆನೆದು ಹಿರಿಯರು ಆಡುತ್ತಿದ್ದ ಮಾತು. ಈ ಮಾತಿನ ಅರ್ಥ ದಟ್ಟವಾಗಿ ಸುರಿಯುವ ಮಳೆಯಿಂದ ಕೆರೆಗಳಲ್ಲಿದ್ದ ಸಣ್ಣಪುಟ್ಟ ಮರಿ ಮೀನು ಕೆರೆ ಮತ್ತು ನೆಲದ ವ್ಯತ್ಯಾಸ ತಿಳಿಯದೆ ನೀರಿನಿಂದ ಹೊರಕ್ಕೆ
ಜಿಗಿಯುತ್ತವೆ ಎಂದು.
ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದ ಮಲೆನಾಡ ಹೆಬ್ಬಾಗಿಲು ತರೀಕೆರೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕಳೆದ ಹತ್ತಾರು ವರ್ಷಗಳಿಂದ ಎಡಬಿಡದೆ ಸುರಿಯವ ಮಳೆಯನ್ನೇ ಕಂಡಿಲ್ಲ.
ಪರಿಣಾಮ ವರ್ಷದಿಂದ ವರ್ಷಕ್ಕೆ ತರೀಕೆರೆ ಭೂ ಭಾಗದ ಅಂತರ್ಜಲ ಖಾಲಿಯಾಗಿ ಬಾವಿ, ಕೆರೆ, ಹಳ್ಳ-ಕೊಳ್ಳಗಳು ಬರಿದಾಗಿವೆ. ಜನ ಜಾನುವಾರಗಳಿಗೆ ಕುಡಿಯಲು ನೀರಿಲ್ಲದಂತಾಗಿ ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರನ್ನು ತಂದು ಸರಬರಾಜು ಮಾಡುವ ಸ್ಥಿತಿ ತಲೆದೋರಿದೆ.
ಕಂಗಾಲಾಗಿರುವ ಮೀನು: ದಿನದಿಂದ ದಿನಕ್ಕೆ ನೀರಿಲ್ಲದೆ ಒಣಗುತ್ತಿರುವ ಕೆರೆಗಳಲ್ಲಿ ಮೀನುಗಳ ಪಾಡು ಕಷ್ಟವಾಗಿದೆ. ತಾಲೂಕಿನ ಬಹುತೇಕ ಕೆರೆಗಳಲ್ಲಿ ಸರ್ಕಾರವೆ ಬಿಟ್ಟು ಪೋಷಿಸಿದ ಲಕ್ಷಾಂತರ ಮೀನು ಸಾವಿನ ಅಂಚಿನಲ್ಲಿದೆ. ಇದರಿಂದ ಮೀನು ಕೃಷಿಗಾರರಿಗೂ ನಷ್ಟ ಸಂಭವಿಸಿದೆ.
ಮೀನು ಮರಿಗಳ ಪೋಷಣೆ: ಸಮೀಪದ ಲಕ್ಕವಳ್ಳಿಯ ರಾಜ್ಯ ಮೀನು ಸಾಕಾಣಿಕೆ ಕೇಂದ್ರದಿಂದ ತರೀಕೆರೆ ತಾಲೂಕು ಮೀನುಗಾರಿಕೆ ಇಲಾಖೆ ಮೂಲಕ ತಾಲೂಕಿನ ವಿವಿಧ ಕೆರೆಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಮೀನು ಮರಿಗಳನ್ನು ತರಿಸಿ ಕೆರೆಗಳಲ್ಲಿ ಅವುಗಳನ್ನು ಪೋಷಿಸಲಾಗಿತ್ತು. ಆದರೆ ದುರ್ದೈವ ಕಳೆದ ವರ್ಷಗಳಲ್ಲಿ ಅಂತಹ ಹೇಳಿಕೊಳ್ಳುವ ಮಳೆಯಾಗದೆ ಕೆರೆಗಳೆಲ್ಲಾ ನೀರಿಲ್ಲದೆ ಬರಿದಾಗ
ತೊಡಗಿತ್ತು, ಆದರೂ ಇಲಾಖೆ ಧೈರ್ಯ ಮಾಡಿ ಮುಂದೆ ಮಳೆ ಬರಬಹುದೆಂಬ ನಿರೀಕ್ಷೆಯಿಂದ ಮೀನು ಮರಿಗಳನ್ನು ತರಿಸಿ ಕೆರೆಯಲ್ಲಿ ಬಿಟ್ಟು ಬೆಳೆಸಲಾಗಿತ್ತು. ಆದರೆ ನಿರೀಕ್ಷೆ ಹುಸುಯಾಗಿದ್ದು, ಕೆರೆಗಳು ಒಣಗುತ್ತಿರುವು ಪರಿಣಾಮ ಮೀನು ಕೃಷಿ ಅವಸಾನಕ್ಕೆ ತಲುಪುತ್ತಿದೆ.
ಹೂಳು ತುಂಬಿದೆ: ಕೆರೆಗಳಲ್ಲಿ ನೀರು ಹಿಡುವಳಿ ಕಡಿಮೆಯಾಗಿ ಹೂಳು ತುಂಬಿಕೊಂಡಿದೆ, ಪರಿಣಾಮ ಅಕ್ಷಯವಾಗಬೇಕಾದ ಮೀನುಗಳ ಸಂಖ್ಯೆ ಕ್ಷಯಿಸ
ತೊಡಗಿದೆ. ನೀರಿಲ್ಲದೆ ಎಷ್ಟೋ ಕೆರೆಗಳಲ್ಲಿ ಮೀನುಗಳು ಬದುಕು ಮತ್ತು ಸಾವಿನ ನಡುವೆ ಹೋರಾಟ ಮಾಡುತ್ತಿದೆ. ಇದರಿಂದ ತಾಲೂಕಿನಲ್ಲಿ ಮೀನು ಕೃಷಿಗೆ ನಷ್ಟ ಉಂಟಾಗುತ್ತಿದೆ.
ಸರ್ಕಾರ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿದೆ, ಒಂದೆರೆಡು ಕೆರೆಗಳನ್ನು ಬಿಟ್ಟರೆ ಮಿಕ್ಕಂತೆ ತಾಲೂಕಿನ ಮೀನು ಕೃಷಿಯಲ್ಲಿ ತೊಡಗಿಸಿಕೊಂಡಿರುವ ಸುಮಾರು 26 ಕೆರೆಗಳಲ್ಲೂ ಇಂತಹ ಪರಿಸ್ಥಿತಿ ತಲೆದೋರಿದೆ. ವೃತ್ತಿಪರರಿಗೆ, ಸ್ವಯಂ ಮೀನು ಕೃಷಿಗಾರರಿಗೆ ನಷ್ಟ ಸಂಭವಿಸಿದೆ, ಮೀನುಗಳ ಉತ್ಪತ್ತಿಯೂ ಗಣನೀಯವಾಗಿ ಕಡಿಮೆಯಾಗಿದೆ. ಮಳೆಯೊಂದೇ ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ಹೇಳಬೇಕಾಗಿದೆ.
- ಅನಂತ ನಾಡಿಗ್