ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜಿಲ್ಲೆಗೆ ಮರೀಚಿಕೆ ಆಗಲೀದೆಯೇ ಮಂತ್ರಿ ಸ್ಥಾನ?

Lingaraj Badiger
Updated On : 11 May 2013, 11:08 am

-ಆರ್. ತಾರಾನಾಥ್
ಕಪ್ರ ವಾರ್ತೆ, ಚಿಕ್ಕಮಗಳೂರು, ಮೇ 10
ನಿಶ್ಚಳ ಬಹುಮತ ಪಡೆದಿರುವ ಕಾಂಗ್ರೆಸ್ ಪಕ್ಷ ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಲಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಚರ್ಚೆ ನಡೆಯುತ್ತಿದೆ.
ಜಿಲ್ಲೆಯಲ್ಲಿ ಇಬ್ಬರು ವಿಧಾನ ಪರಿಷತ್ ಮಹಿಳಾ ಸದಸ್ಯರು, ಓರ್ವರು ಕಾಂಗ್ರೆಸ್ ಶಾಸಕರು ಇದ್ದಾರೆ. ಇವರಲ್ಲಿ ಯಾರಿಗಾದರೂ ಸಚಿವ ಸ್ಥಾನ ಸಿಗಬಹುದೇ ಎಂಬ ಲೆಕ್ಕಚಾರ ನಡೆಯುತ್ತಿದೆ. ಆದರೆ, ಜಿಲ್ಲೆಗೆ ಒಂದಾದರೂ ಸಚಿವ ಸ್ಥಾನ ನೀಡಿ ಎಂದು ಧೈರ್ಯವಾಗಿ ಕೇಳುವ ಪರಿಸ್ಥಿತಿ ಕಾಂಗ್ರೆಸ್ ಮುಖಂಡರಿಗೆ ಇಲ್ಲದಂತಾಗಿದೆ. ಇದಕ್ಕೆ ಒಂದಲ್ಲಾ ಹಲವು ಕಾರಣಗಳಿವೆ.
ಆರೋಪದ ಮಾತುಗಳು: ಮಾಜಿ ಸಚಿವೆ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕಿಯಾಗಿ ಅನುಭವ ಇರುವ ಮೋಟಮ್ಮ ಹಾಲಿ ವಿಧಾನಪರಿಷತ್ ಸದಸ್ಯರು. ಅವರು ತಮಗೆ ಮಂತ್ರಿ  ಪದವಿ ನೀಡುವಂತೆ ಒತ್ತಾಯಿಸಬಹುದು. ಆದರೆ, ಅವರ ಮೂಡಿಗೆರೆ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಸೋತಿದೆ. ಈ ಫಲಿತಾಂಶಕ್ಕೆ ಮೋಟಮ್ಮ ಅವರೇ ಕಾರಣ ಎಂಬ ಆರೋಪದ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಈ ಆರೋಪ ಕೆಪಿಸಿಸಿ ಕಿವಿಗೆ ಮುಟ್ಟಿದರೆ, ಮೋಟಮ್ಮ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಅನುಮಾನ.
ಸೋತಿದ್ದಾರೆ: ಇನ್ನೋರ್ವ ವಿಧಾನಪರಿಷತ್ ಸದಸ್ಯರಾಗಿರುವ ಗಾಯಿತ್ರಿ ಶಾಂತೇಗೌಡ. ಅವರ ಪತಿ ಕೆ.ಎಸ್. ಶಾಂತೇಗೌಡ ಅವರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಸ್ಪರ್ಧೆ ಮಾಡಿ ಸೋತಿದ್ದಾರೆ. ಅದುದರಿಂದ ಅವರಿಗೂ ಮಂತ್ರಿ ಸ್ಥಾನ ಸಿಗುವುದು ಅನುಮಾನ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಇನ್ನುಳಿದಂತೆ ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ತರೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಚ್. ಶ್ರೀನಿವಾಸ್ ಗೆಲುವು ಸಾಧಿಸಿದ್ದಾರೆ. ಅವರು ಫಸ್ಟ್ ಟೈಂ ಶಾಸಕರಾಗಿದ್ದರಿಂದ ಅವರಿಗೂ ಸಚಿವ  ಸ್ಥಾನ ಸಿಗುವುದಿಲ್ಲ ಎಂಬ ಮಾತನ್ನು ತೆಗೆದು ಹಾಕುವಂತ್ತಿಲ್ಲ.
2004ರ ಫಲಿತಾಂಶ: 2004ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಗಿದ್ದ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ತರೀಕೆರೆ ಕ್ಷೇತ್ರವೊಂದರಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಆಗ ಮೊದಲ ಬಾರಿಗೆ ಟಿ.ವಿ. ಶಿವಶಂಕರಪ್ಪ ಶಾಸಕರಾಗಿದ್ದರು. ಆಗ ರಾಜ್ಯದಲ್ಲಿ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಬಹುಮತ ಬರದೆ ಇದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಧರ್ಮಸಿಂಗ್ ಮಂತ್ರಿ ಮಂಡಲದಲ್ಲಿ ಜಿಲ್ಲೆಗೆ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಆಗ ಹಾಸನ ಜಿಲ್ಲೆಯವರಾದ ಬಿ. ಶಿವರಾಂ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು.
 ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದ್ದಾಗ ಜಿಲ್ಲೆಯಲ್ಲಿ ಮೂವರು ಬಿಜೆಪಿ ಶಾಸಕರು ಇದ್ದರು. ಆಗ ಯಾರಿಗೂ ಮಂತ್ರಿ ಪದವಿ ಸಿಕ್ಕಿರಲಿಲ್ಲ. ಕೆಲ ದಿನಗಳ ಮಟ್ಟಿಗೆ ಡಿ.ಎಚ್. ಶಂಕರಮೂರ್ತಿ, ಕೆ.ಎಸ್. ಈಶ್ವರಪ್ಪ, ರಾಮಚಂದ್ರಗೌಡ, ರೇಣುಕಾಚಾರ್ಯ, ಸುರೇಶ್‌ಕುಮಾರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.
 2008ರ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಆಗಲೂ ಜಿಲ್ಲೆಗೆ ಸಚಿವ ಸ್ಥಾನ ಸಿಗಲಿಲ್ಲ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ ಎರಡು ಸಚಿವ ಸ್ಥಾನ ಸಿಕ್ಕಿತ್ತು.
 ಈ ಚುನಾವಣೆಯಲ್ಲಿ ಕಾಂಗ್ರೆಸ್ ನಿಶ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಆದರೆ, ಜಿಲ್ಲೆಗೆ ಒಂದಾದರೂ ಸಚಿವ ಸ್ಥಾನ ನೀಡಿ ಎಂದು ಕೇಳುವ ಪರಿಸ್ಥಿತಿಯಲ್ಲಿ ಜಿಲ್ಲಾ ಕಾಂಗ್ರೆಸ್ ಇಲ್ಲ. ಅದುದರಿಂದ ಜಿಲ್ಲೆಗೆ ಸಚಿವ ಸ್ಥಾನ ಮರೀಚಿಕೆಯಾಗಲಿದೆಯೇ ಎಂಬ ಪ್ರಶ್ನೆ ಜಿಲ್ಲೆಯ ಸಾರ್ವಜನಿಕರಿಗೆ ಎದುರಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement