ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವ್ಯಾಪಾರಿ ವಿರೋಧಿ ನೀತಿ ಹಿಂಪಡೆಯಲು ಆಗ್ರಹ

Lingaraj Badiger
Updated On : 11 May 2013, 11:03 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು,  ಮೇ 10
ಸಾಮಾನ್ಯ ಔಷಧಿಗಳನ್ನು ಜೀವರಕ್ಷಕ ಔಷಧಿಗಳ ಗುಂಪಿಗೆ ಸೇರಿಸುವ ಮೂಲಕ ಈಗಿರುವ ಲಾಭಾಂಶವನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಸರ್ಕಾರದ ಈ ನಿರ್ಧಾರವನ್ನು ವಿರೋಧಿಸುವ ಜತೆಗೆ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಔಷಧ ವ್ಯಾಪಾರಿಗಳು ಶುಕ್ರವಾರ ತಮ್ಮ ವಹಿವಾಟು ಸ್ಥಗಿತಗೊಳಿಸಿದ್ದರು.
ಬಳಿಕ ಜಿಲ್ಲಾಧಿಕಾರಿಗಳಿಗೆ ಔಷಧ ವ್ಯಾಪಾರಿಗಳು ಮನವಿ ಸಲ್ಲಿಸಿದರು. ಸಾಮಾನ್ಯ ಔಷಧಿಗಳ ಮಾರಾಟದ ಮೇಲೆ ಶೇ.4 ರಷ್ಟು ಲಾಭಾಂಶ ಕಡಿಮೆಯಾಗಲಿದೆ.
ಸರ್ಕಾರ ಸಾಮಾನ್ಯ ಔಷಧಿಗಳನ್ನು ಡಿಪಿಸಿಓ ಕಾಯ್ದೆಯಡಿ ತಂದು ಅವುಗಳ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾದರೂ ನಮಗೆ ತೊಂದರೆಯಿಲ್ಲ. ಆದರೆ, ಸಾಮಾನ್ಯ ಔಷಧಿಗಳ ಮೇಲಿನ ಲಾಭಾಂಶದಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಸಂಘದ ಅಧ್ಯಕ್ಷ ಎಸ್. ಶಿವಾನಂದ ಅವರು ಆಗ್ರಹಿಸಿದ್ದಾರೆ.
ಯಾವುದೇ ಔಷಧಿಗಳಲ್ಲಿ ನಮೂದಿಸಿರುವ ರಾಸಾಯನಿಕಗಳ ಪ್ರಮಾಣದಲ್ಲಿ ವ್ಯತ್ಯಾಸವಾದರೆ, ಅಂತಹ ಔಷಧಿಗಳನ್ನು ಮಾರಾಟ ಮಾಡಿದ ವ್ಯಾಪಾರಿಗಳ ವಿರುದ್ಧವೇ ಪ್ರಕರಣ ದಾಖಲಿಸುವಂತೆ ಕಾಯ್ದೆಯಲ್ಲಿ ಬದಲಾವಣೆ ತರುತ್ತಿರುವುದು ಖಂಡನೀಯ. ಔಷಧಿ ತಯಾರಿಕೆಯಲ್ಲೇ ವ್ಯತ್ಯಾಸವಾಗಿದ್ದರೆ ಅದು ವ್ಯಾಪಾರಿಗಳಿಗೆ  ಹೇಗೆ ತಿಳಿಯುತ್ತದೆ ಎಂದು ಪ್ರಶ್ನಿಸಿರುವ ಅವರು, ಉತ್ಪಾಧಕರ ತಪ್ಪಿಗೆ ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಔಷಧ ಸಗಟು ಹಾಗೂ ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಿದರೆ ಈ ವ್ಯಾಪಾರದಲ್ಲಿ ತೊಡಗಿರುವ ಸಾವಿರಾರು ಜನರು ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಈ ಹೂಡಿಕೆಗೆ ಅನುಮತಿ ನೀಡಬಾರದೆಂದು ಆಗ್ರಹಿಸಿದ್ದಾರೆ.
ಇದರಿಂದ ರಾಜ್ಯದ ಔಷಧ ವ್ಯಾಪಾರಿಗಳ ಸಂಘದ 25 ಸಾವಿರ ಹಾಗೂ ದೇಶಾದ್ಯಂತ 7.5 ಲಕ್ಷ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಂಜುನಾಥ್, ಅನಿಲ್‌ಕುಮಾರ್, ಟಿ.ಎಂ. ತಿಪ್ಪೇಸ್ವಾಮಿ, ಸುನೀಲ್ ಹಾಜರಿದ್ದರು.

ವಹಿವಾಟು ಸ್ಥಗಿತ
ಶೃಂಗೇರಿ: ಔಷಧಿ ವ್ಯಾಪಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ವ್ಯಕ್ತಪಡಿಸಿದರು. ಬೆಳಗ್ಗೆಯಿಂದಲೇ ಅಂಗಡಿಗಳನ್ನು ಬಂದ್ ಮಾಡಿದ್ದರಿಂದ ಗ್ರಾಹಕರು ಪರದುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಔಷಧಿ ವ್ಯಾಪಾರದಲ್ಲಿ ನೇರ ವಿದೇಶಿ ಬಂಡವಾಳದಿಂದ ಚಿಲ್ಲರೆ ಔಷಧಿ ವ್ಯಾಪರಗಳ ಮೇಲೆ ಪರಿಣಾಮ ಬೀರುವುದರಿಂದ ತೀವ್ರ ವಿರೋಧ ವ್ಯಕ್ತಪಡಿಸಿದರು.

ಔಷಧಿ ಅಂಗಡಿಗಳ ಬಂದ್
ಕಡೂರು/ಬೀರೂರು: ಸಾಮಾನ್ಯ ಔಷಧಿಗಳನ್ನು ಜೀವರಕ್ಷಕ ಔಷಧಿಗಳ ಗುಂಪಿಗೆ ಸೇರಿಸಿ ಲಾಭಾಂಶ ಕಡಿಮೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿರುವುದನ್ನು ಖಂಡಿಸಿ ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮಾಡಿದ ಬಂದ್‌ನಿಂದಾಗಿ ಔಷಧಿ ಅಂಗಡಿಗಳು ಮುಚ್ಚಿದ್ದರಿಂದ ರೋಗಿಗಳು ತೀವ್ರವಾಗಿ ಪರದಾಡುವಂತಾಯಿತು.
ಔಷಧಿ ಮಾಲೀಕರ ರಾಷ್ಟ್ರವ್ಯಾಪಿ ಮುಷ್ಕರದ ಪರಿಣಾಮ ಕಡೂರು ಹಾಗೂ ಬೀರೂರು ಪಟ್ಟಣಗಳಲ್ಲಿ ಚಿಕ್ಕಮಗಳೂರು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದಿಂದ ಹಮ್ಮಿಕೊಂಡಿದ್ದ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ಮೂಲಕ ಜನರು ಪರದಾಡುವಂತಾಯಿತು. ಡಿಪಿಒಸಿ ಕಾಯ್ದೆ ತಂದು ಬೆಲೆಗಳಲ್ಲಿ ಯಾವುದೇ ಬದಲಾವಣೆಯಾದರೆ ತೊಂದರೆಯಿಲ್ಲ ಎಂದು ಸಂಘದ ಜಿಲ್ಲಾಧ್ಯಕ್ಷ ಎಸ್. ಶಿವಾನಂದ ಹೇಳಿದರು. ದೂರದ ಊರುಗಳಿಂದ ಬಂದಿದ್ದ ಮತ್ತು ಆಸ್ಪತ್ರೆಗಳ ರೋಗಿಗಳಿಗೆ ಹೊರಗಿನಿಂದ ಬೇಕಾಗುವ ತುರ್ತು ಔಷಧಿ ಸಿಗದೆ ಪರದಾಡುತ್ತಿದ್ದ ದೃಶ್ಯ ಕಂಡು ಬಂದಿತು.
---

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement