ದತ್ತಪೀಠಕ್ಕೆ 12 ಕೋಟಿ ಬಿಡುಗಡೆ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಮೇ 11
ದತ್ತಪೀಠದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ 12 ಕೋಟಿ ಮಂಜೂರು ಮಾಡಿ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ ಕಾಮಗಾರಿಯನ್ನು ಮುಂದುವರೆಸಲು ಅಗತ್ಯವಿರುವ ಅನುದಾನವನ್ನು ನೂತನ ಸರ್ಕಾರ ಬಿಡುಗಡೆ ಮಾಡಬೇಕೆಂದು ಶಾಸಕ ಸಿ.ಟಿ. ರವಿ ಮನವಿ ಮಾಡಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಶನಿವಾರ ದತ್ತಪೀಠಕ್ಕೆ ಭೇಟಿ ನೀಡಿ ಪಾದುಕೆಗಳ ದರ್ಸನ ಪಡೆದು ನಂತರ ಮಾತನಾಡಿದ ಅವರು, ದತ್ತಪೀಠದಲ್ಲಿ ಯಾತ್ರಿ ನಿವಾಸ ನಿರ್ಮಾಣ, ಮಾಣಿಕ್ಯಧಾರಾ ಅಭಿವೃದ್ಧಿ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಭಕ್ತಾಧಿಗಳಿಗೆ ಕುಡಿಯುವ, ಶೌಚಾಲಯ ಇನ್ನಿತರ ಮೂಲಭೂತ ಸೌಕರ್ಯಗಳಿಗೆ 12 ಕೋಟಿ ಮಂಜೂರಾಗಿದೆ, ಅದನ್ನು ಪೂರ್ಣ ಅನುಷ್ಠಾನಕ್ಕೆ ತರಲು ಸರ್ಕಾರ ಆದ್ಯತೆ ನೀಡಬೇಕು ಎಂದರು.
ಪಾದುಕೆಗಳ ದರ್ಶನ ಪಡೆದಿದ್ದೇನೆ: ಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ಹಾಗೂ ಚುನಾವಣೆ ನಂತರ ದತ್ತಪೀಠಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವುದು ನನ್ನ ಪದ್ಧತಿ. ಅದರಂತೆಯೇ ಪಾದುಕೆಗಳ ದರ್ಶನ ಪಡೆದಿದ್ದೇನೆ ಎಂದರು.
ಸರ್ಕಾರ ಬದಲಾದ ಕಾರಣ ಈ ಹಿಂದಿನ ಅಭಿವೃದ್ಧಿಯ ವೇಗದಲ್ಲಿ ಸ್ವಲ್ಪ ಕುಂಠಿತವಾಗಬಹುದು, ಆದರೆ, ಅನುದಾನ ತರುವುದರಲ್ಲಿ ಹಿಂದೆ ಬೀಳುವುದಿಲ್ಲ ಎಂದು ಹೇಳಿದರು.
ಒಂದು ಕ್ಷಣದ ಸಮಾಧಾನ ಭವಿಷ್ಯಕ್ಕೆ ಒಳ್ಳೆಯದು, ಅದೇ ಒಂದು ಕ್ಷಣದ ಕೋಪ ಭವಿಷ್ಯವನ್ನೇ ಹಾಳು ಮಾಡುತ್ತದೆ, ಕಾರ್ಯಕರ್ತರು ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು, ಮೈಮೇಲೆ ಬಿದ್ದು ಜಗಳಕ್ಕೆ ಬರುವ ಸಂದರ್ಭ ಇದಾದ ಕಾರಣ ತಾಳ್ಮೆ ಕಳೆದುಕೊಳ್ಳಬೇಡಿ ಎಂದರು.
ನ್ಯಾಯ ಒದಗಿಸುತ್ತೇನೆ: ಜನರ ಆಶೀರ್ವಾದಕ್ಕೆ ವೈಯುಕ್ತಿಕವಾಗಿ ಋಣ ತೀರಿಸಲು ಆಗದಿದ್ದರೂ ಅಭಿವೃದ್ಧಿಯ ಮೂಲಕ ನ್ಯಾಯ ಒದಗಿಸುತ್ತೇನೆ ಎಂದ ಅವರು, ಈ ಚುನಾವಣೆಯಲ್ಲಿ ನಾವು ಪ್ರವಾಹದ ವಿರುದ್ಧ ಈಜಿದ್ದೇವೆ, ಹಲವು ಒತ್ತಡಗಳ ನಡುವೆ ಹೆಚ್ಚು ಮತ ಗಳಿಸಿದ್ದೇವೆ, ಒಳ್ಳೆಯ ಕೆಲಸಗಳಿಗೆ ಎಂದಿಗೂ ನಿಮ್ಮೊಂದಿಗಿರುತ್ತೇವೆ. ಇನ್ನೊಬ್ಬರಿಗೆ ತೊಂದರೆ ಕೊಡಲು ನನ್ನನ್ನು ಬಳಸಿಕೊಳ್ಳಬೇಡಿ, ತಪ್ಪು ಮಾಡಿದರೆ ಬುದ್ಧಿ ಹೇಳಿ, ಮಾಡಿದ ಕೆಲಸ ಸರಿ ಇದ್ದರೆ ಬೆನ್ನುತಟ್ಟಿ ಎಂದು ಕೋರಿದರು.
ಶಾಸಕಾಂಗ ಪಕ್ಷದ ಸಭೆಯ ನಂತರ ನಗರ ಹಾಗೂ ಕ್ಷೇತ್ರದ ಗ್ರಾಮಾಂತರ ಭಾಗದ ಜನರನ್ನು ಭೇಟಿಮಾಡಿ ಕೃತಜ್ಞತೆ ಸಲ್ಲಿಸಲಿದ್ದೇನೆ ಎಂದು ತಿಳಿಸಿದ ಅವರು, ಅಭಿವೃದ್ಧಿ ಮಾತ್ರ ನಮಗೆ ಗೆಲುವು ತಂದುಕೊಟ್ಟಿಲ್ಲ, ಕ್ಷೇತ್ರದ ಜನರ ನೆಮ್ಮದಿಯೂ ಸಹ ನಮಗೆ ಮತ ಬೀಳಲು ಸಹಕಾರಿಯಾಯಿತು ಎಂದರು.
ಇದಕ್ಕೂ ಮುನ್ನ ಹಿರೇಮಗಳೂರು ಶ್ರೀ ಕೋದಂಡರಾಮಚಂದ್ರ ಸ್ವಾಮಿ, ಮಲ್ಲೇನಹಳ್ಳಿಯ ದೇವೀರಮ್ಮ ದೇವಸ್ಥಾನಕ್ಕೆ ಪತ್ನಿ ಪಲ್ಲವಿ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ನಗರಸಭಾ ಸದಸ್ಯ ರವೀಂದ್ರಪ್ರಭು, ಗ್ರಾ.ಪಂ. ಉಪಾಧ್ಯಕ್ಷ ಶಿವಕುಮಾರ್, ಜಿ.ಪಂ. ಸದಸ್ಯರ ಜೆ.ಡಿ. ಲೋಕೇಶ್, ಕುಲಶೇಖರ್, ಶಿವರಾಜ್, ಲೋಕೇಶ್, ಆಕಾಶ್, ಕೆಂಪನಹಳ್ಳಿ ಕುಮಾರ್, ಶೈಲಜಾ ಪ್ರಕಾಶ್, ವೆನಿಲ್ಲಾ, ಮಂಜುನಾಥ್, ಕೇಶವ, ಜಗದೀಶ್ ಹಾಜರಿದ್ದರು.